

ಸಿಂಧನೂರು: ಇತ್ತೀಚೆಗೆ ಸಂಸ್ಕಾರ ಕಡಿಮೆ ಆಗುತ್ತಿದ್ದು, ಪ್ರತಿಯೊಬ್ಬರೂ ಲಿಂಗಧಾರಣೆಯ ಮಹತ್ವ ಅರಿಯುವ ಮೂಲಕ ಬದುಕು ಸುಂದರವಾಗಿಸಿಕೊಳ್ಳಬೇಕೆಂದು ಇಳಕಲ್ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ನಗರದ ಬಸವ ಚಾರಿಟಬಲ್ ಟ್ರಸ್ಟ್‌ನಿಂದ ನೀಲಾಂಬಿಕಾ ಪ್ರಸಾದ ನಿಲಯದಲ್ಲಿನ ವಿದ್ಯಾರ್ಥಿನಿಯರಿಗೆ ಲಿಂಗದೀಕ್ಷೆ ಪ್ರದಾನ ಮಾಡಿ ಭಾನುವಾರ ಮಾತನಾಡಿದರು. ದೇವರು 84 ಕೋಟಿ ಜೀವರಾಶಿಗಳನ್ನು ಸೃಷ್ಟಿ ಮಾಡಿದ್ದು, ಎಲ್ಲ ಜೀವರಾಶಿಗಳಿಗೆ ಚೇತನವಿದೆ. ಭೂಮಿಗೂ ಚೇತನ ಶಕ್ತಿಯಿದೆ. ಆ ಶಕ್ತಿಗೆ ಕೆಲವರು ಭಗವಾನ್, ಏಸು, ಪರಬ್ರಹ್ಮ ಎಂದು ಕರೆದರೆ, ಬಸವಣ್ಣ ಲಿಂಗ ಎಂದು ಕರೆದರು ಎಂದು ತಿಳಿಸಿದರು.
ಬ್ರಹ್ಮಾಂಡದ ಶಕ್ತಿ ನಮ್ಮ ಪಿಂಡದಲ್ಲಿದೆ. ಅಂದರೆ ದೇವರು ನಮ್ಮಲ್ಲಿಯೇ ಇದ್ದಾನೆ. ನಮ್ಮನ್ನು ನಾವು ವಿಕಾಸ ಮಾಡಿಕೊಳ್ಳಬೇಕು. ತಂದೆ- ತಾಯಿ, ಅತ್ತೆ-ಮಾವ, ಅಜ್ಜಿ-ಅಜ್ಜ ಅವರನ್ನು ಪೂಜಿಸಿ ಗೌರವಿಸಿದರೆ ಅವರ ಆಶೀರ್ವಾದದಿಂದ ಒಳ್ಳೆಯದಾಗುತ್ತದೆ. ದೇವರು ಕರುಣಾಮಯಿ, ಸರ್ವ ಶಕ್ತ ಹಾಗೂ ಎಲ್ಲ ಬಲ್ಲವನಾಗಿದ್ದಾನೆ ಎಂದರು.
ನಮ್ಮಲ್ಲಿ ದ್ವೇಷ, ಹೊಟ್ಟೆಕಿಚ್ಚು ಎಂಬ ಕಸಯಿದ್ದು, ಈ ಕಸದಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ. ಮೊದಲು ಅವಗುಣಗಳೆಂಬ ಕಸವನ್ನು ತೆಗೆಯಬೇಕು. ಆ ಕಸ ತೆಗೆದಾಗ ಅಲ್ಲಿ ದೇವರು ನೆಲೆಗೊಳ್ಳುತ್ತಾನೆ. ಕಸ ತೆಗೆಯಬೇಕಾದರೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು. ಬುದ್ಧ ಮಹಾಶಯ ತಪಸ್ಸು ಮಾಡಿದ ಅಂದರೆ ಆತ ಮನಸ್ಸನ್ನು ಕೇಂದ್ರೀಕರಿಸಿದ . ಮನಸ್ಸು ಕೇಂದ್ರೀಕರಿಸಲು ಕಾಡಿಗೆ ಹೋಗಿ ತಪಸ್ಸು ಮಾಡೋದಕ್ಕಿಂತ ಇಷ್ಟಲಿಂಗವನ್ನು ಧ್ಯಾನಿಸಿದರೆ ಸಾಕು ಎಂದು ಗುರುಮಹಾಂತ ಸ್ವಾಮೀಜಿ ತಿಳಿಸಿದರು.
ಬಸವಕೇಂದ್ರದ ಜಿಲ್ಲಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದ, ಸಿದ್ದರಾಮಪ್ಪ ಸಾಹುಕಾರ ಮಾಡಸಿರವಾರ, ಶಂಬನಗೌಡ ನೀಡಿಗೊಳ, ಬಸವಲಿಂಗಪ್ಪ ಬಾದರ್ಲಿ, ಶಾಂತಪ್ಪ ಚಿಂಚರಕಿ, ಪಂಪನಗೌಡ ಮಲ್ಲಾಪುರ, ಚಂದ್ರೇಗೌಡ ಹರಟನೂರ, ಎಚ್.ಜಿ.ಹಂಪಣ್ಣ, ಗುಂಡಪ್ಪ ಬಳಿಗಾರ, ಬಸವರಾಜ ವಕೀಲ, ಗಂಗಮ್ಮ ಕುರುಕುಂದ, ಸಾವಿತ್ರಮ್ಮ ಬಾದರ್ಲಿ, ವಿಜಯಲಕ್ಷ್ಮೀ, ಶ್ರೀದೇವಿ ಪಿ. ಕುರುಕುಂದ ಇದ್ದರು.