ಹುಕ್ಕೇರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸೇಲಂನಲ್ಲಿ 140 ಜನರಿಗೆ ಇಷ್ಟಲಿಂಗ ದೀಕ್ಷೆ

selam
Published on

ಸೇಲಂ : ಯಾವ ಧರ್ಮದಲ್ಲಿ ಹುಟ್ಟಿದ್ದೇವೆ ಎನ್ನುವುದಕ್ಕಿಂತ ಆಯಾ ಧರ್ಮದ ಆಚರಣೆಗಳಿಂದ ಧರ್ಮ ಪರಂಪರೆಯನ್ನು ಗುರುತಿಸಿಕೊಳ್ಳುವುದು ತಾತ್ವಿಕವಾಗಿ ಸರಿಯಾದ ಪದ್ಧತಿ. ಇಷ್ಟಲಿಂಗವನ್ನು ಧರಿಸದೆ ವೀರಶೈವ ಲಿಂಗಾಯತನಾಗಲು ಸಾಧ್ಯವಿಲ್ಲ ಆದ್ದರಿಂದ ವೀರಶೈವ ಲಿಂಗಾಯತರು ಕಡ್ಡಾಯವಾಗಿ ಇಷ್ಟ ಲಿಂಗವನ್ನು ಧರಿಸಬೇಕು ಎಂದು ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಭಾನುವಾರ ತಮಿಳುನಾಡಿನ ಸೇಲಂನ ಪ್ರಾಚೀನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಮಾತನಾಡಿದರು. ವೀರಶೈವ ಲಿಂಗಾಯತ ಮತಾವಲಂಬಿಗಳು ದೇಶದ ಎಲ್ಲ ಪ್ರಾಂತಗಳಲ್ಲಿದ್ದು, ಆಚರಣೆಯಿಂದ ಧರ್ಮ ಸಿದ್ಧಾಂತವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದ ಕರ್ತವ್ಯ ಈ ಧರ್ಮದಲ್ಲಿ ಹುಟ್ಟಿದ ಪ್ರತಿಯೊಬ್ಬನ ಮೇಲೂ ಇದೆ ಎಂದು ಶ್ರೀಗಳು ಹೇಳಿದರು. ಸ್ವಾಮೀಜಿ ಮಾತಿನಿಂದ ಪ್ರೇರಣೆಗೊಂಡ ತಮಿಳುನಾಡಿನ ವೀರಶೈವ ಜಂಗಮ ಸಮಾಜವು ಮುಂಬರುವ ಡಿಸೆಂಬರ್ ತಿಂಗಳಲ್ಲಿ 1008 ಜನರಿಗೆ ಇಷ್ಟಲಿಂಗ ದೀಕ್ಷೆ ನೀಡುವ ಕಾರ್ಯಕ್ರಮ ಏರ್ಪಡಿಸುವುದಾಗಿ ೋಷಿಸಿದರು.

ಸಮಾರಂಭದಲ್ಲಿ ತಾವರೆಕೆರೆ ಶಿಲಾಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಜಾತಿವಾಚಕವಲ್ಲ. ಅದು ತತ್ವವಾಚಕವಾಗಿದೆ. ಈ ತತ್ವದ ಪರಿಪಾಲನೆ ಮಾಡುವ ಮೂಲಕ ಇಷ್ಟಲಿಂಗ ಸಂಸ್ಕೃತಿಯನ್ನು ವಿಸ್ತರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ನಂದಿಪುರದ ಶ್ರೀಮಹೇಶ್ವರ ಸ್ವಾಮೀಜಿ, ಕರ್ನೂಲಿನ ಶ್ರೀ ಅಜಾತ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಪಂಚಸೂತ್ರ ಅಕಾಡೆಮಿಯ ಚಂದ್ರಶೇಖರ್, ಅಖಿಲ ಭಾರತ ವೀರಶೈವ ಮಹಾಸಭೆಯ ಉಪಾಧ್ಯಕ್ಷೆ ವಿನುತಾ ರವಿ, ತಮಿಳುನಾಡು ವೀರಶೈವ ಮುಖಂಡರಾದ ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net