

ಅಥಣಿ: ಇಷ್ಟಲಿಂಗ ಪೂಜೆಯಿಂದ ಸಂಕಷ್ಟಗಳು ದೂರಾಗುತ್ತವೆ. ಮಾನಸಿಕ ನೆಮ್ಮದಿ, ಸಮಾಧಾನಕ್ಕೆ ನಿತ್ಯ ಲಿಂಗಪೂಜೆ ರೂಢಿಸಿಕೊಳ್ಳಬೇಕು ಎಂದು ಗುರುಮಠಕಲ್ಲದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಗಚ್ಚಿನಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವರಾತ್ರಿಯನ್ನು ಭಕ್ತಿಭಾವದಿಂದ ಆಚರಿಸಬೇಕು. ಕೇವಲ ಶಿವರಾತ್ರಿ ಆಚರಣೆಗೆ ಸೀಮಿತವಾಗದೆ ನಿತ್ಯ ಶಿವಸ್ಮರಣೆ ಮಾಡಬೇಕು ಎಂದರು. ಬಿಗ್‌ಬಾಸ್ ಸ್ಪರ್ಧಿಗಳಾದ ಗೋಲ್ಡ್ ಸುರೇಶ, ಎಸ್.ಆರ್. ಧನರಾಜ ಮಾತನಾಡಿ, ಇಷ್ಟಲಿಂಗ ಪೂಜೆಯಿಂದ ಗುಣಾತ್ಮಕ ಅಂಶಗಳು ಜಾಗೃತವಾಗುತ್ತವೆ ಎಂದರು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಶಿವಯೋಗ ಸಾಧನೆಗೆ ಇಷ್ಟಲಿಂಗ ಪೂಜೆ ಉತ್ತಮ ಮಾರ್ಗವಾಗಿದೆ ಎಂದರು.
ಪಲ್ಲಕ್ಕಿ ಉತ್ಸವ: ಶಿವರಾತ್ರಿ ನಿಮಿತ್ತ ಮುರುಘೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ವಚನಾಭಿಷೇಕ ಜರುಗಿತು. ಬಸವತತ್ತ್ವ ಧ್ವಜಾರೋಹಣ, ಬಸವಣ್ಣನವರ ವಚನಗ್ರಂಥ ಮತ್ತು ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ವೃಂದದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಮರಳಿ ಗಚ್ಚಿನಮಠ ತಲುಪಿತು.
ಸಿದ್ದಬಸವ ಕಬೀರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ವೀರೇಶ್ವರ ದೇವರು, ಮಹಾಂತ ಸಿದ್ಧೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಪ್ರಕಾಶ ಮಹಾಜನ, ಗುರುಬಸು ತೆವರಮನಿ, ಶಿವಕುಮಾರ ಸವದಿ, ರಾಜು ಬಿಳ್ಳೂರ, ಬಾಬು ಗಲಗಲಿ, ಚಂದ್ರಶೇಖರ ಯಲ್ಲಟ್ಟಿ, ಶಾಮರಾವ ಪೂಜಾರಿ, ಧರೆಪ್ಪ ಠಕ್ಕಣ್ಣವರ, ಗುರುಭೀಮರಾಯ ಬಡವಾಳ ಇತರರಿದ್ದರು.