ಮನೋಸ್ಥೈರ್ಯ ವೃದ್ಧಿಗೆ ಇಷ್ಟಲಿಂಗ ಪೂಜೆ ಅಗತ್ಯ

3kmr1
ಕಮಲನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಇಷ್ಟಲಿಂಗ ದೀಕ್ಷೆ ಹಾಗೂ ಶ್ರಾವಣ ಪ್ರವಚನ ಸಮಾರೋಪದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಶ್ರೀ ಗುರುಬಸವ ಪಟ್ಟದ್ದೇವರು, ಪ್ರಕಾಶ ಟೊಣ್ಣೆ, ಡಾ.ಸಂಜೀವಕುಮಾರ ಜುಮ್ಮಾ, ರಾಜು ಜುಬರೆ, ಪ್ರಭುರಾವ ಕಳಸೆ ಇತರರಿದ್ದರು.
Published on

ಕಮಲನಗರ: ದೇವರು ಗುಡಿಗಳಲ್ಲಿ ಇಲ್ಲ, ನಮ್ಮ ನಮ್ಮ ಆತ್ಮದಲ್ಲಿದ್ದಾನೆ. ದೇವರನ್ನು ಕಾಣಲು ನಾವು ಪೂಜಾರಿಗಳಿಗೆ ಗುಲಾಮರಾಗಬೇಕಿಲ್ಲ. ಗುಡಿ ಗುಂಡಾರಗಳಿಗೆ ಬೆನ್ನು ಹತ್ತುವ ಬದಲು, ಪ್ರತಿಯೊಬ್ಬರೂ ತಮ್ಮ ಮನೆಯಲ್ಲೇ ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು. ಮನೋಸ್ಥೈರ್ಯ ವೃದ್ಧಿಗೆ ಇಷ್ಟಲಿಂಗ ಪೂಜೆ ಅಗತ್ಯವಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಶ್ರಾವಣ ಮಾಸದ ಪ್ರವಚನ ಸಮಾರೋಪ ಸಮಾರಂಭದ ಅಂಗವಾಗಿ ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನದಲ್ಲಿ ಮಂಗಳವಾರ ಭಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡಿ, ನಮ್ಮಳಗಿರುವ ಮಹಾ ಮನಸ್ಸು ಗಟ್ಟಿಗೊಳಿಸಿಕೊಳ್ಳಲು ಇಷ್ಟಲಿಂಗ ನೆರವಾಗುತ್ತದೆ. ಈ ಲಿಂಗದ ಮೂಲಕ ಮನಸ್ಸು ನಿಯಂತ್ರಿಸಿ ಆತ್ಮಬಲ ಹೆಚ್ಚಿಸಿಕೊಂಡಾಗ ಸಹಜವಾಗಿಯೇ ಶರೀರ ಹಾಗೂ ಭಾವ ಶುದ್ಧಿಯಾಗುತ್ತದೆ. ಇದರಿಂದ ಸಂಸ್ಕಾರವAತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ನಮ್ಮ ಸಮಾಜದ ಯುವಕರು ಬೇರೆ ಬೇರೆ ಪರಂಪರೆಗಳ ಆಚರಣೆ ಮಾಡುತ್ತ ಮೂಲ ಲಿಂಗಾಯತ ಧಾರ್ಮಿಕ ಸಿದ್ಧಾಂತ ಮರೆಯುತ್ತಿರುವುದು ವಿಷಾದನೀಯ. ನಮ್ಮ ಸಂಸ್ಕೃತಿ ಮರೆತರೆ ನಮ್ಮತನ ಮರೆತಂತೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಪ್ರವಚನಕಾರ ಡಾ.ಸಂಜೀವಕುಮಾರ ಜುಮ್ಮಾ, ನೀಲಾಂಬಿಕಾ ಆಶ್ರಮದ ಮಹದೇವಮ್ಮ ತಾಯಿ, ಮುಖಂಡ ಪ್ರಕಾಶ ಟೊಣ್ಣೆ, ಸಾಹಿತಿ ರಾಜು ಜುಬರೆ ಮಾತನಾಡಿದರು.

ಯುವತಿಯರು, ಮಹಿಳೆಯರು, ಮಕ್ಕಳು ಸೇರಿ ಸುಮಾರು ೧೨೩ ಕ್ಕೂ ಹೆಚ್ಚು ಜನ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಿಂಗಧಾರಣೆಯ ವಿಧಿ ವಿಧಾನಗಳನ್ನು ತಿಳಿದುಕೊಂಡರು.

ರಾಜಕುಮಾರ ಬಿರಾದಾರ, ಧನರಾಜ ಸೊಲ್ಲಾಪುರೆ, ಅವಿನಾಶ ಶಿವಣಕರ, ಸುರೇಶ ಸೊಲ್ಲಾಪುರೆ, ಶಿವಶರಣಪ್ಪ ಚಿಕಮುರ್ಗೆ, ಅಮರ ಶಿವಣಕರ, ಹಾವಗಿ ಟೊಣ್ಣೆ, ಶಾಮರಾವ ಬಿರಾದಾರ, ಮಹಾದೇವ ಬಿರಾದಾರ, ಕಲ್ಲೇಶ ಉದಗಿರೆ, ಯಶವಂತ ಬಿರಾದಾರ, ಧನರಾಜ ಭವರಾ, ಅಜಿತ್ ರಾಗಾ, ಜೀತೇಂದ್ರ ಮಹಾಜನ, ರಾಮೇಶ್ವರ ಶಿವಣಕರ ಇತರರಿದ್ದರು.

ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಪ್ರಭುರಾವ ಕಳಸೆ ಸ್ವಾಗತಿಸಿದರು. ಪ್ರಭುರಾವ ಬಿರಾದಾರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net