

ಹುಬ್ಬಳ್ಳಿ: ರಷ್ಯಾದ ಮಾಸ್ಕೋ ಬಾಲಕನೊಬ್ಬ ಸೋಮವಾರ ಇಷ್ಟಲಿಂಗ ದೀಕ್ಷೆ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾನೆ.
ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರ ಪ್ರದೇಶದ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ದೀೆ ನೀಡಿದರು.
ರಷ್ಯಾದ ಪಾರ್ವತಿ ಎಂಬುವವರ ಪುತ್ರ ಎಂಟು ವರ್ಷದ ಆ್ಯಂಡ್ರೆ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈ ಹಿಂದೆ ಸಹಸ್ರಾರು ಜನರು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದರು.
ಈ ಪೈಕಿ ವೀರಶೈವ ಧರ್ಮ ಸಿದ್ಧಾಂತ ಸ್ವೀಕರಿಸಿ ಇಷ್ಟಲಿಂಗ ದೀಕ್ಷೆ ಹೊಂದಿದ್ದ ರಷ್ಯಾದ ಪಾರ್ವತಿ (ಹೆಸರು ಬದಲಿಸಿದೆ) ಎಂಬುವವರು ನಿತ್ಯವೂ ಅವರ ಮನೆಯಲ್ಲಿ ಇಷ್ಟಲಿಂಗ ಪೂಜೆಯ ಅನುಷ್ಠಾನ ಮಾಡುತ್ತಾರೆ. ಇದನ್ನು ಅವಲೋಕನ ಮಾಡಿ ಪ್ರಭಾವಿತನಾದ ಬಾಲಕ ಆ್ಯಂಡ್ರೆ, ತನಗೂ ಇಷ್ಟಲಿಂಗ ದೀಕ್ಷೆ ಬೇಕೆಂದು ಹಟ ಹಿಡಿದಿದ್ದರಿಂದ ಮಗುವಿನ ಪಾಲಕರು ಕಾಶಿ ಪೀಠದಲ್ಲಿ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿದ್ದಾರೆ.
ರಷ್ಯಾದ ಬಾಲಕ ಆ್ಯಂಡ್ರೆಗೆ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಇಷ್ಟಲಿಂಗ ದೀಕ್ಷೆ ಕರುಣಿಸಿ ಅವನಿಗೆ "ಗಣೇಶ' ಎಂದು ಮರು ನಾಮಕರಣ ಮಾಡಿದರು.
ಮಹಾರಾಷ್ಟ್ರ ರಾಜ್ಯದ ದಹಿವಡಕರ ಹಿರೇಮಠದ ಶ್ರಿಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಬಾಲಕ ಆ್ಯಂಡ್ರೆಗೆ ಮಂತ್ರೋಪದೇಶ ಮಾಡಿದರು. ರಷ್ಯಾದಿಂದ ಆಗಮಿಸಿದ್ದ ಬಾಲಕ ಆ್ಯಂಡ್ರೆ ಪಾಲಕರು ಹಾಗೂ ಬಂಧುಗಳು ಇದ್ದರು.