ದುಡಿಮೆಗೆ ದೈವತ್ವದ ಸ್ವರೂಪಕೊಟ್ಟ ಶರಣರು : ಗುರುದೇವಿ ಹುಲೆಪ್ಪನವರಮಠ ಅಭಿಮತ

Screenshot_2023_0915_181230.png
Published on

ಬೆಳಗಾವಿ : ಇಷ್ಟಲಿಂಗಪೂಜೆಗೆ ಸಾರ್ಥಕತೆ ಬರಬೇಕಾದರೆ ಸತ್ಯಶುದ್ಧ ಕಾಯಕ ಮಾಡಬೇಕು. ಆ ಕಾಯಕದಿಂದ ಸಮಾಜಕ್ಕೆ ದಾಸೋಹ ರೂಪದಲ್ಲಿ ನೀಡಬೇಕು. ಹೀಗಾಗಿ ಕಾಯಕವೇ ಶರಣರ ದೃಷ್ಟಿಯಲ್ಲಿ ಮೊದಲ ಪೂಜೆಯಾಗಿದೆ ಎಂದು ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.

ಬೆಳಗಾವಿ ಕಾರಂಜಿಮಠದಲ್ಲಿ ಸೋಮವಾರ ನಿಮಿತ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ಮತ್ತು ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳವರ 156ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, 12ನೇ ಶತಮಾನದ ಶಿವಶರಣರು ಕಾಯಕ ಮತ್ತು ದಾಸೋಹ ಪರಿಕಲ್ಪನೆಗಳ ಮೂಲಕ ದುಡಿಮೆಗೆ ದೈವತ್ವದ ಸ್ವರೂಪವನ್ನು ತಂದುಕೊಟ್ಟರು. ಇಷ್ಟಲಿಂಗಪೂಜೆ ಎಂಬುದು ಒಂದು ಮಾನಸಿಕ ಪೂಜೆ, ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳಲು ಅನುಸಂಧಾನ ಮಾಡುವ ಕ್ರಿಯೆಯಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡಿ-ಶರಣರು ಲಿಂಗಪೂಜೆಗಿಂತಲೂ ಕಾಯಕಕ್ಕೆ ತುಂಬ ಮಹತ್ವ ಕೊಟ್ಟರು. ದೇವರಿಗೂ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟವರು ಶರಣರು. ಶರಣರ ಆದರ್ಶದ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು ಎಂದು ಹೇಳಿದರು. ಶ್ರಾವಣ ಮಾಸದ ನಿಮಿತ್ಯ ಶ್ರೀಮಠದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮಗಳು ಜನರಿಗೆ ಸುಜ್ಞಾನಬೋಧೆ ನೀಡಿದವು. ಶ್ರವಣ-ಮನನ-ನಿಧಿಧ್ಯಾಸಗಳ ಮೂಲಕ ಅಧ್ಯಾತ್ಮಿಕ ಚಿಂತನೆ ಮಾಡಲು ಅವಕಾಶ ದೊರೆಯಿತು ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು  ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಿಂದ ಆಗಮಿಸಿದ ಶಿವಾನಂದ ಬಸ್ಸಾಪುರಿ ದಂಪತಿಗಳನ್ನು ಶ್ರೀಗಳು ಸನ್ಮಾನಿಸಿದರು. ಕಾರಂಜಿಮಠದ ಸಂಗೀತ ಶಾಲೆಯ ಮಕ್ಕಳು ಮತ್ತು ಮಾತೃಮಂಡಳಿ ತಾಯಂದಿರು ಸಂಗೀತಸೇವೆ ಸಲ್ಲಿಸಿದರು.  ಪ್ರೊ.ಶ್ರೀಕಾಂತ ಶಾನವಾಡ ಅವರು ಸ್ವಾಗತಿಸಿದರು. ಎ.ಕೆ. ಪಾಟೀಲ ನಿರೂಪಿಸಿದರು, ವಿ.ಕೆ. ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net