ಕೃಷಿ-ಕೃಷ್ಣ ಜಾಗೃತಿಗಾಗಿ 'ಈಶಪ್ರಿಯ' ಹೆಜ್ಜೆ...

Shree Lead
Published on

ಅದಮಾರು ಶ್ರೀಗಳಿಂದ ಜ್ಞಾನಾರ್ಥ ಪಾದಯಾತ್ರೆ

ತಮಿಳುನಾಡಿನಿಂದ ಆಂಧ್ರಪ್ರದೇಶದವರೆಗೆ ಯಾತ್ರೆ

ಪ್ರಶಾಂತ ಭಾಗ್ವತ, ಉಡುಪಿ

ಉಡುಪಿಯ ಅಷ್ಟ ಮಠಗಳಲ್ಲೊಂದಾದ ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಶ್ರೀಪಾದರು ಏ.26ರಿಂದ ಮೇ 15ರ ವರೆಗೆ ತಮಿಳುನಾಡಿನ ಘಟಿಕಾಚಲಮ್​ನಿಂದ ಆಂಧ್ರಪ್ರದೇಶದ ನರಸಿಂಹ ಕೊಂಡದವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

Shree 2
ಸಾಮಾನ್ಯ ಜನರನ್ನು ತಲುಪಿ ಕೃಷಿಗೆ ಉತ್ತೇಜನ, ಪ್ರಕೃತಿಯ ರಕ್ಷಣೆ ಹಾಗೂ ಆ ಕುರಿತಾದ ಜ್ಞಾನ ಪ್ರಸಾರದ ಉದ್ದೇಶದೊಂದಿಗೆ 20 ದಿನದ ಯಾತ್ರೆಯಲ್ಲಿದ್ದಾರೆ. ಮಾರ್ಗ ಮಧ್ಯದ ಹಳ್ಳಿಗಳಲ್ಲಿರುವ ಕೆಳ ವರ್ಗದ ಹಾಗೂ ಬಡವರ ಮನೆಗಳಿಗೆ ತೆರಳಿ ಕೃಷ್ಣ ಮಂತ್ರದ ಉಪದೇಶ ನೀಡುತ್ತಿದ್ದಾರೆ. ಕ್ಷಣಾರ್ಧದ ಸಭೆ ನಡೆಸಿ ಶ್ರೀಕೃಷ್ಣಾಯ ನಮಃ, ಶ್ರೀ ಗೋವಿಂದಾಯ ನಮಃ ಎಂಬ ಮಂತ್ರ ಬೋಧಿಸಿ ಯಾತ್ರೆ ಮುಂದುವರಿಸುತ್ತಿದ್ದಾರೆ.

ಯಾತ್ರೆಯಲ್ಲಿರುವ ಶ್ರೀಗಳು ವಿಜಯವಾಣಿಯೊಂದಿಗೆ ಮಾತನಾಡಿ, ಪಾದಯಾತ್ರೆಯ ಉದ್ದೇಶದ ಕುರಿತು ವಿಚಾರ-ವಿಷಯ ವಿನಿಮಯ ಮಾಡಿದ್ದಾರೆ.

ಪಾದಯಾತ್ರೆ ನಡೆಸಲು ಕಾರಣವೇನು?

ಭಾರತದಲ್ಲಿ ಹಿಂದಿನಿಂದಲೂ ಸಹ ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸ ಎಂಬ ನಾಲ್ಕು ಆಶ್ರಮದ ಆಚರಣೆಯಿದೆ. ಸನ್ಯಾಸಾಶ್ರಮ ಸ್ವೀಕರಿಸುವವರಿಗೆ ಪರಿವ್ರಾಟ ಎಂದೂ ಕರೆಯುತ್ತಾರೆ. ಅಂದರೆ ನಿರಂತರವಾಗಿ ಒಂದೂರಿನಿಂದ ಇನ್ನೊಂದೂರಿಗೆ ಸಂಚರಿಸುವುದು ಎಂದರ್ಥ. ಯಾತ್ರೆ ಮೂಲಕ ಅಧ್ಯಯನ ಮಾಡಬೇಕು, ಅದನ್ನು ತನ್ನ ಶಿಷ್ಯರಿಗೂ ಹೇಳಿಕೊಡಬೇಕೆಂಬ ನಿಯಮವಿದೆ. ಅದರ ಪರಿಪಾಲನೆಯೇ ಈ ಪಾದಯಾತ್ರೆ.

ಈಗಿನ ಸನ್ಯಾಸಿಗಳೆಲ್ಲ ಮಠದಲ್ಲೇ ಇರುತ್ತಾರಲ್ಲ?

ಸನ್ಯಾಸಿಗೂ ಸಹ ಒಂದೇ ಜಾಗದಲ್ಲಿದ್ದರೆ ಯಾವುದೋ ವಿಷಯವಾಗಿ ಪ್ರಾಯಶಃ ವ್ಯಾಮೋಹ ಬರಬಹುದು. ಹೀಗಾಗಿ ಇಲ್ಲಿ ನನ್ನದೇನೂ ಇಲ್ಲ, ಎಲ್ಲವೂ ದೇವರದ್ದು ಎಂಬ ಭಾವನೆಯೊಂದಿದ್ದಾಗ ಸನ್ಯಾಸದ ಪರಮೋಚ್ಚದ ಫಲ ಲಭಿಸುತ್ತದೆ. ಹಾಗಾಗಿ ಸಂಚಾರ ಮಾಡುತ್ತಿರಬೇಕು. ಎಲ್ಲರಿಗೂ ಇದು ಸಾಧ್ಯವಾಗದಿದ್ದರೂ ಪ್ರಯತ್ನ ಮಾಡಬೇಕೆಂದು ಹಿರಿಯರೂ ಹೇಳುತ್ತಾರೆ. ಅದೇ ರೀತಿ ತಾನು ತನ್ನೊಳಗೆ ಅಳವಡಿಸಿಕೊಳ್ಳುತ್ತಿರಬೇಕು.

ಸನ್ಯಾಸಿಗಳು ಎಲ್ಲಿಗೆ, ಏಕೆ ಸಂಚಾರ ಮಾಡಬೇಕು?

ಎಲ್ಲಿಗೆ ಯಾತ್ರೆ ಮಾಡಬೇಕೆಂದರೆ ತೀರ್ಥ ಕ್ಷೇತ್ರಗಳಿಗೆ. ಅಲ್ಲಿಗೆ ಹೋಗುವುದರಿಂದ ನಾವು ಪುಣ್ಯ ಪಡೆಯುತ್ತೇವೆ. ಯಾರು ಶಾಸ್ತ್ರಾಧ್ಯಯನದಿಂದ ಜ್ಞಾನಿಗಳಾಗಿ ತೀರ್ಥದಲ್ಲಿ ಮುಳುಗುತ್ತಾರೋ ಆ ತೀರ್ಥವೇ ಪವಿತ್ರವಾಗುತ್ತದೆ. ಒಳ್ಳೆಯ ಅನುಷ್ಠಾನವಂತ ನಡೆದ ಜಾಗವೆಲ್ಲವೂ ಪುಣ್ಯ ಕ್ಷೇತ್ರವಾಗುತ್ತದೆ. ಹೀಗಾಗಿ ಸನ್ಯಾಸಿ ಸಂಚಾರ ಮಾಡಬೇಕು. ಪಾದಯಾತ್ರೆ ಅಥವಾ ಯಾತ್ರೆ ನಮ್ಮನ್ನು ಎತ್ತರಕ್ಕೆ ಏರಿಸಿಕೊಳ್ಳಲು ಇರುವ ವಿಶೇಷ ಆಚರಣೆ.

ಪಾದಯಾತ್ರೆಯಿಂದಾಗುವ ಲಾಭವೇನು?

ಯಾತ್ರೆ ಮಾಡಿದಾಗ ಜೀವನಾನುಭವ ಹೆಚ್ಚಾಗುತ್ತದೆ. ಪರವೂರಿನ ಜನಜೀವನ ಅರ್ಥವಾಗುತ್ತದೆ. ಆ ಪ್ರದೇಶದಲ್ಲಿ ಎಂತಹ ಚಿಂತನೆ ಇದೆಯೆಂದು ತಿಳಿದು ನಾವು ಪಕ್ವವಾಗಲು ಸಹಕಾರಿ. ಯಾತ್ರೆಯ ಸನ್ಯಾಸಿಯನ್ನು ನೋಡುವ ಜನರೂ ಸಹ ಸಾಕಷ್ಟು ಪಾಠ ಕಲಿಯುತ್ತಾರೆ. ತ್ಯಾಗಿಗಳಾಗುತ್ತಾರೆ. ಹೀಗಾಗಿ ಯಾತ್ರೆ ಎನ್ನುವುದು ಭಾರತದ ವಿಶೇಷವಾದ ಆಚರಣೆ. ಹೆಚ್ಚಿನ ಜ್ಞಾನ ಸಂಪಾದನೆಗಾಗಿ ಯಾತ್ರೆ ಮಾಡಬೇಕು. ಅದನ್ನು ಮೈಗೂಡಿಸಿಕೊಳ್ಳಬೇಕು.

ಇಂತಹ ಯಾತ್ರೆ ನಿರಂತರ ನಡೆಯಲಿದೆಯೇ?

ಇಂದಿನ ಯಾತ್ರೆ ಹೇಗಿದೆಯೆಂದರೆ ಇಲ್ಲಿ ಕುಳಿತುಕೊಂಡು ಎಲ್ಲಿಗೆ ಹೋಗಬೇಕೋ ಅಲ್ಲಿ ಇಳಿಯುವುದಾಗಿದೆ. ಅದು ಸರಿಯಲ್ಲ. ಅದರಿಂದ ಅನುಭವ ಸಿಗದು. ಪಾದಯಾತ್ರೆಯೇ ಸರಿಯಾದ ಯಾತ್ರೆ. ಕಾಲಕ್ಕೆ ತಕ್ಕಂತೆ ಸನ್ಯಾಸಿಗಳೂ ಸಹ ಎಲ್ಲ ಜನರನ್ನು ತಲುಪಲು ವಾಹನ ಬಳಸುತ್ತಿದ್ದಾರೆ. ಅದು ತಪ್ಪು ಎಂದಲ್ಲ. ಆದರೆ, ಸ್ವಲ್ಪವಾದರೂ ಪಾದಯಾತ್ರೆ ಅಳವಡಿಸಿಕೊಳ್ಳಬೇಕು. ಅದಕ್ಕಾಗಿ ಈ ಪಾದಯಾತ್ರೆ. ಈ ಪಾದಯಾತ್ರೆ 20 ದಿನದ್ದಾಗಿದೆ. ಮುಂದೆ 40 ದಿನ, ಎರಡು ತಿಂಗಳು, ಮೂರು ತಿಂಗಳು ಹೀಗೆ ಹೆಚ್ಚೆಚ್ಚು ಪಾದಯಾತ್ರೆ ನಡೆಸುತ್ತೇವೆ. ಹೆಚ್ಚು ಜನರನ್ನು ತಿಳಿದುಕೊಳ್ಳುವ ಮೂಲಕ ಶಾಸ್ತ್ರ ಹಾಗೂ ಜ್ಞಾನ ಅನುಭವಿಸಲು ಪಾದಯಾತ್ರೆ ಮುಂದುವರಿಸುತ್ತೇವೆ.

ಪ್ರಸ್ತುತ ದೇಶದ ಪರಿಸ್ಥಿತಿಯಲ್ಲಿ ಧಾರ್ಮಿಕ ಜಾಗೃತಿ ಆಗಬೇಕಿದೆ. ದೇಶಭಕ್ತಿ ಮತ್ತು ಎಲ್ಲ ಹಿಂದುಗಳ ಐಕ್ಯತೆಗಾಗಿ ಪಾದಯಾತ್ರೆಯ ಅಗತ್ಯತೆ ಇದೆ. ದೇಶದ ಎಲ್ಲ ಜನರನ್ನೂ ಭೇಟಿ ಮಾಡಿ ಸನಾತನ ಧರ್ಮದ ಅರಿವು ಮೂಡಿಸಬೇಕಿದೆ. | ಈಶಪ್ರಿಯ ತೀರ್ಥ ಶ್ರೀಪಾದರು. ಅದಮಾರು ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net