ಬಿಬಿಎಂಪಿಗೆ ಇದೇ ಕೊನೆಯ ಆಯವ್ಯಯ ?

BBMP Head Office
Published on

ಆರ್​​.ತುಳಸಿಕುಮಾರ್​

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಶುಕ್ರವಾರ (ಮಾ.28) ಮಂಡನೆಯಾಗಲಿರುವ ಬಜೆಟ್ ಕೊನೆಯ ಆಯವ್ಯಯವಾಗುವ ಸಾಧ್ಯತೆ ಇದೆ. ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಎ) ವಿಧೇಯಕಕ್ಕೆ ವಿಧಾನಮಂಡಲವು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ, ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಮುಂದಿನ ವರ್ಷ ಸಣ್ಣ ಪಾಲಿಕೆಗಳ ರಚನೆ ಬೆನ್ನಲ್ಲೇ ಹೊಸ ಬಗೆಯ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ.

ಜಿಬಿಎ ವಿಧೇಯಕದ ಪರ, ವಿರೋಧ ಮುಂದುವರಿದಿದ್ದರೂ, ಹಾಲಿ ಬಿಬಿಎಂಪಿ ಆಯವ್ಯಯದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಕುತೂಹಲ ಇದ್ದಂತಿಲ್ಲ. ಚುನಾಯಿತ ಆಡಳಿತ ಇಲ್ಲದ ಕಾರಣ ಹಿಂದಿನ ವರ್ಷಗಳಲ್ಲಿ ನಾಗರಿಕ ಸೌಕರ್ಯಕ್ಕೆ ಹೆಚ್ಚಿನ ಮನ್ನಣೆ ನೀಡಿಲ್ಲ ಎಂಬ ಆಕ್ಷೇಪ ಜನರಲ್ಲಿದೆ. ಇದಕ್ಕೆ ಹಲವು ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಕೂಡ ದನಿಯೇರಿಸಿವೆ. ಈ ಅಪವಾದ ನಿವಾರಿಸಲು ಸರ್ಕಾರ ಬೃಹತ್ ಯೋಜನೆಗಳಿಗೆ ಹೆಚ್ಚಿನ ಅನುದಾನ ನಿಗದಿಗೊಳಿಸಿ ಬಜೆಟ್ ಗಾತ್ರ ಹಿಗ್ಗಿಸುವ ತಂತ್ರಕ್ಕೆ ಶರಣಾಗಿದೆ. ಬಹುಶಃ ಬಿಬಿಎಂಪಿಯ ಕೊನೆಯ ಬಜೆಟ್ ಆಗಲಿರುವ ಕಾರಣ 19-20 ಸಾವಿರ ಕೋಟಿ ರೂ. ದಾಖಲೆ ಮೊತ್ತದ ಆಯವ್ಯಯದ ಕೊಡುಗೆ ಜನರು ನಿರೀಕ್ಷಿಸಬಹುದಾಗಿದೆ.

ಕಳೆದ ನಾಲ್ಕೂವರೆ ವರ್ಷದಿಂದ ಬಿಬಿಎಂಪಿಯಲ್ಲಿ ಚುನಾಯಿತ ಆಡಳಿತ ಇಲ್ಲದ ಕಾರಣ ಸತತ 5ನೇ ಬಾರಿ ಅಧಿಕಾರಿಗಳೇ ಆಯವ್ಯಯ ಮಂಡಿಸಲಿದ್ದಾರೆ. ಸರ್ಕಾರದ ಮರ್ಜಿಯಲ್ಲಿರುವ ಅಧಿಕಾರಿಗಳು ಅಧಿಕಾರಸ್ಥರು ಸೂಚಿಸುವಂತೆ ಬಜೆಟ್ ಸಿದ್ಧಪಡಿಸಿ ಮಂಡಿಸುವವರಿದ್ದಾರೆ. ಹಾಗಾಗಿ ಈ ಬಾರಿಯೂ ಸರ್ಕಾರದ ಮೂಗಿನ ನೇರಕ್ಕೆ ಆಯವ್ಯಯ ಹೊರಬರುವುದು ನಿಶ್ಚಿತ.

ಪ್ರಸ್ತುತ ಜಿಬಿಎ ವಿಧೇಯಕ ವಿಧಾನಮಂಡಲದ ಒಪ್ಪಿಗೆ ಬಳಿಕ ಅನುಮೋದನೆಗಾಗಿ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಆದರೆ, ವಿಧೇಯಕದಲ್ಲಿ ಕೆಲವೊಂದು ಅಂಶಗಳ ಬಗ್ಗೆ ವಿವರಣೆ ಕೋರಿ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದು, ಮಾರ್ಪಡಿಸಿದ ರೂಪದಲ್ಲಿ ಮರುಮಂಡಿಸಲು ಸಲಹೆ ನೀಡಲಾಗಿದೆ. ರಾಜ್ಯಪಾಲರ ಈ ನಡೆ ಆಧರಿಸಿ ಸರ್ಕಾರ ಕೆಲ ಸಮಯದ ಬಳಿಕ ಮತ್ತೊಮ್ಮೆ ರಾಜಭವನಕ್ಕೆ ಕಳುಹಿಸುವ ಸಾಧ್ಯತೆ ಇದೆ. ಇದು ಹಾಲಿ ಬಿಬಿಎಂಪಿ ಬಜೆಟ್‌ಗೆ ಯಾವುದೇ ಅಡ್ಡಿಯಾಗದಿದ್ದರೂ, ಮುಂದಿನ ವರ್ಷ ಬಿಬಿಎಂಪಿ ಅಥವಾ ಜಿಬಿಎ ಆಯವ್ಯಯ ಮಂಡನೆಯಾಗುವ ಬಗ್ಗೆ ಕುತೂಹಲ ಹುಟ್ಟುಹಾಕಿದೆ.

ಸಣ್ಣ ಪಾಲಿಕೆಗಳಿಂದ ಕಡಿಮೆ ಗಾತ್ರದ ಬಜೆಟ್:

ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಅಂಗೀಕಾರವಾದಲ್ಲಿ ಬಿಲ್‌ನಲ್ಲಿ ಅಡಕವಾಗಿರುವ ರೀತಿಯಲ್ಲೇ ಬಜೆಟ್ ಮಂಡನೆಯಾಗಬೇಕಿದೆ. ಅಂದರೆ, ಸಣ್ಣ ಪಾಲಿಕೆಗಳು ತಮ್ಮ ವ್ಯಾಪ್ತಿ ಹಾಗೂ ಸಂಪನ್ಮೂಲ ಬಲ ಆಧರಿಸಿಯೇ ಆಯವ್ಯಯ ಸಿದ್ಧಪಡಿಸಬೇಕಿದೆ. ಈಗಿನಂತೆ ಸರ್ಕಾರದ ನೆರವು ಹಾಗೂ ಊಹಾತ್ಮಾಕ ಹಣಕಾಸು ಸ್ಥಿತಿ ಆಧರಿಸಿ ಬಜೆಟ್ ಮಂಡಿಸುವ ಪರಿಪಾಠಕ್ಕೆ ಬ್ರೇಕ್ ಬೀಳಲಿದೆ. ಮುಖ್ಯವಾಗಿ ಜಿಬಿಎ ಅಡಿಯಲ್ಲಿ ಎಷ್ಟು ಸಂಖ್ಯೆಯ ಪಾಲಿಕೆಗಳು ಹೊಸದಾಗಿ ರಚನೆಯಾಗಲಿವೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೂ 3 ಅಥವಾ 5 ಪಾಲಿಕೆ ರಚಿಸುವ ಬಗ್ಗೆ ಸರ್ಕಾರಕ್ಕೆ ಒಲವು ಇದ್ದಂತಿದೆ. ಮೂರು ಪಾಲಿಕೆಗಳು ರಚನೆಯಾದಲ್ಲಿ ತಲಾ 10 ಸಾವಿರ ಕೋಟಿ ರೂ. ಮೊತ್ತದ ಆಯವ್ಯಯ ಗಾತ್ರವಿರುವ ಸಾಧ್ಯತೆ ಇದೆ. ಐದು ಪಾಲಿಕೆಗಳಾಗಿದ್ದಲ್ಲಿ ಬಜೆಟ್ ಗಾತ್ರ ಕಡಿಮೆ ಇರುತ್ತದೆ. ಬಜೆಟ್‌ಗೆ ಜಿಬಿಎ ಒಪ್ಪಿಗೆ ಕಡ್ಡಾಯ ಇರುವುದರಿಂದ ದೊಡ್ಡ ಮೊತ್ತ ನಿಗದಿ ಸಾಧ್ಯವಾಗದು. ಒಂದು ವೇಳೆ ಕಡಿಮೆ ಸಂಪನ್ಮೂಲ ಕ್ರೋಡೀಕರಣವಾದಲ್ಲಿ ಸರ್ಕಾರವೇ ಆರ್ಥಿಕ ನೆರವನ್ನು ಪಾಲಿಕೆಗಳಿಗೆ ಹಂಚಿಕೆ ಮಾಡುವ ಅವಕಾಶವೂ ಬಿಲ್‌ನಲ್ಲಿ ಅಡಕಗೊಳಿಸಲಾಗಿದೆ.

ಸಂಪನ್ಮೂಲ ಹಂಚಿಕೆಗೆ ಆಕ್ಷೇಪ:

ಜಿಬಿಎ ಅಡಿಯಲ್ಲಿ ರಚನೆಯಾಗುವ ಪಾಲಿಕೆಗಳು ದೊಡ್ಡ ಪ್ರಮಾಣದಲ್ಲಿ ಸಂಪನ್ಮೂಲ ಸಂಗ್ರಹಿಸುವಲ್ಲಿ ಸಫಲವಾಗದು ಎಂಬ ವಾದ ಮುಂದಿಡಲಾಗಿದೆ. ಆಸ್ತಿ ತೆರಿಗೆ ಸೇರಿ ವಿವಿಧ ಶುಲ್ಕಗಳು ಆಯಾ ಪಾಲಿಕೆಗಳ ರಚನೆ, ಪ್ರದೇಶವನ್ನು ಆಧರಿಸಿರುತ್ತದೆ. ಹೆಚ್ಚು ಹಣ ಸಂಗ್ರಹವಾಗದಿದ್ದಲ್ಲಿ ಬಜೆಟ್ ಗಾತ್ರ ಹೆಚ್ಚಿಸಲು ಸಾಧ್ಯವಿಲ್ಲ. ಕಡಿಮೆಯಾದರೂ ಸರ್ಕಾರ ಪೂರ್ಣವಾಗಿ ಕೈಹಿಡಿಯುವ ಖಾತರಿ ಇಲ್ಲ. ಜತೆಗೆ ಸರ್ಕಾರ ಹಾಗೂ ಪಾಲಿಕೆಗಳಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದ್ದಲ್ಲಿದ್ದರೆ ನಿರೀಕ್ಷಿತ ನೆರವು ಸಿಗದೇಹೋಗಬಹುದು. ಆಗ, ಜಿಬಿಎ ಪ್ರಾಧಿಕಾರವು ಯಾವ ಮಾನದಂಡ ಆಧರಿಸಿ ಪಾಲಿಕೆಗಳನ್ನು ಆರ್ಥಿಕವಾಗಿ ಸದೃಢಗೊಳಿಸುತ್ತದೆ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಇಲ್ಲ. ಈ ಸಮಸ್ಯೆಯಿಂದಾಗಿಯೇ ಪ್ರತಿಪಕ್ಷ ಹಾಗೂ ಕೆಲ ನಾಗರಿಕ ಸಂಘಟನೆಗಳು ಹೆಚ್ಚು ಸಂಖ್ಯೆಯ ಪಾಲಿಕೆ ರಚಿಸಬಾರದು ಎಂದು ಪಟ್ಟು ಹಿಡಿದಿವೆ.

ಜಿಬಿಎ ಅಸ್ತಿತ್ವಕ್ಕೆ ಬಂದ ಬಳಿಕ ಆಯಾ ಪಾಲಿಕೆಗಳು ಸ್ವತಂತ್ರವಾಗಿ ಬಜೆಟ್ ಸಿದ್ಧಪಡಿಸಿ ಮಂಡಿಸಲು ಅವಕಾಶ ಇದೆ. ತಮ್ಮದೇ ಸಂಪನ್ಮೂಲ ಸಂಗ್ರಹಿಸಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬಹುದು. ಒಂದು ವೇಳೆ ಯಾವುದಾದರೂ ಪಾಲಿಕೆಗೆ ಸಂಪನ್ಮೂಲ ಕೊರತೆಯಾದಲ್ಲಿ ಆ ಮೊತ್ತವನ್ನು ಸರ್ಕಾರ ಭರಿಸಿಕೊಡುವಂತೆ ಬಿಲ್‌ನಲ್ಲೇ ಅಡಕಗೊಳಿಸಲಾಗಿದೆ. ಹಾಗಾಗಿ ಭವಿಷ್ಯದಲ್ಲಿ ಹೊಸ ಪಾಲಿಕೆಗಳು ಉತ್ತಮ ಬಜೆಟ್ ಮಂಡಿಸಲು ಅವಕಾಶ ಇದೆ.

- ರಿಜ್ವಾನ್ ಅರ್ಷದ್, ಜಿಬಿಎ ವಿಧೇಯಕ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net