ಬರ ಪರಿಹಾರ ವಿತರಣೆಗಿಂತ ಮುಖ್ಯ ಕೆಲಸ ಇದಿಯಾ?

12
Published on

ಮೈಸೂರು: ರೈತರಿಗೆ ಬರ ಪರಿಹಾರ ನೀಡುವುದಕ್ಕಿಂತ ಮುಖ್ಯವಾದ ಬೇರೆ ಕೆಲಸ ಇದೆಯಾ? ಫ್ರೂಟ್ಸ್ ತಂತ್ರಾಂಶ ನವೀಕರಿಸದೆ ಅಧಿಕಾರಿಗಳು ಅಸಡ್ಡೆ ತೋರುವುದು ಸರಿಯಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿರುವ ಚಾಮುಂಡೇಶ್ವರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಬರ ಪರಿಹಾರ ಹಣದ ದುರ್ಬಳಕೆ ತಡೆಯುವ ಹಾಗೂ ರೈತರಿಗೆ ಶೀಘ್ರ ಪರಿಹಾರ ನೀಡುವ ಸಲುವಾಗಿ ರೈತರ ಜಮೀನಿನ ವಿಸ್ತೀರ್ಣದ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನವೀಕರಿಸುವಂತೆ ಆದೇಶಿಸಿ ಹಲವು ತಿಂಗಳಾಗಿದೆ. ಆದರೂ, ಮೈಸೂರು ಜಿಲ್ಲೆಯಲ್ಲಿ ಫ್ರೂಟ್ಸ್ ನವೀಕರಣ ಶೇ.75 ಮೀರಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಬರಗಾಲದ ಕಾರಣಕ್ಕೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಪರಿಹಾರ ಕೇಳಿ ಕೇಂದ್ರಕ್ಕೆ ಮೆಮೊರಂಡಮ್ ಸಲ್ಲಿಸಿದ್ದು, ಕೇಂದ್ರದ ತಂಡವೂ ರಾಜ್ಯಕ್ಕೆ ಆಗಮಿಸಿ ಬರ ಅಧ್ಯಯನ ನಡೆಸಿದೆ. ಆದರೂ ಕೇಂದ್ರದಿಂದ ಪರಿಹಾರ ಹಣ ಬಂದಿಲ್ಲ. ಹೀಗಾಗಿ ಮೊದಲ ಕಂತಿನ ಹಣವನ್ನು ರಾಜ್ಯ ಸರ್ಕಾರವೇ ಭರಿಸಲು ನಿರ್ಧರಿಸಿದೆ. ಆದರೆ, ಫ್ರೂಟ್ಸ್ ನವೀಕರಿಸದೆ ಅಧಿಕಾರಿಗಳು ಅಸಡ್ಡೆ ತೋರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಫ್ರೂಟ್ಸ್ ತಂತ್ರಾಂಶ ನವೀಕರಿಸದೆ ರೈತರಿಗೆ ನ್ಯಾಯಯುತ ಪರಿಹಾರ ನೀಡುವುದು ಸಾಧ್ಯವಿಲ್ಲ. ರೈತರು ತಮ್ಮ ಜಮೀನಿನ ವಿಸ್ತೀರ್ಣವನ್ನು ನಮೂದಿಸಲು ಮುಂದಾಗದಿದ್ದರೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರು ಪತ್ರಿಕಾ ಪ್ರಕಟಣೆ ನೀಡಿ ರೈತರಲ್ಲಿ ಅರಿವು ಮೂಡಿಸಿ ಮುಂದಿನ ವಾರದಲ್ಲಿ ನವೀಕರಣ ಕೆಲಸ ಮುಗಿಸಿ ಎಂದು ಗಡುವು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net