ಇದು ಹೆದ್ದಾರಿಯೋ, ಚರಂಡಿಯೋ?

national highway
ರಾ.ಹೆ.66ರಲ್ಲಿ ತಲ್ಲೂರು ಸಮೀಪ ಹೆದ್ದಾರಿ ಕುಸಿದಿರುವುದು.
Published on

ರಾಘವೇಂದ್ರ ಪೈ ಗಂಗೊಳ್ಳಿ, ಕುಂದಾಪುರ

ಕುಂದಾಪುರದಿಂದ ಬೈಂದೂರು ಕಡೆಗೆ ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು- ಹೆಮ್ಮಾಡಿ ಮಧ್ಯದ ರಾಜಾಡಿ ಸೇತುವೆ ಬಳಿ ರಸ್ತೆ ಒಂದು ಬದಿ, ಕುಂದಾಪುರ-ಬೈಂದೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಅನೇಕ ಕಡೆಗಳಲ್ಲಿ ಕುಸಿತವಾಗಿದ್ದು, ವಾಹನ ಸವಾರರಿಗೆ ಅಪಾಯ ಎದುರಾಗಿದೆ.

ರಾಜಾಡಿ ಸೇತುವೆಗಿಂತ ತುಸು ಮುಂದೆ ಜಾಲಾಡಿಗಿಂತ ಸ್ವಲ್ಪ ಹಿಂದೆ ಹೆದ್ದಾರಿ ಒಂದು ಬದಿ ಸುಮಾರು ದೂರದವರೆಗೆ ಕುಸಿದಿದೆ. ಅಲ್ಲಿ ಮಣ್ಣು ಸಡಿಲಗೊಂಡು, ಡಾಂಬರು ರಸ್ತೆ ಬಿರುಕು ಬಿಟ್ಟಂತೆ ಕಾಣುತ್ತಿದೆ. ಇಲ್ಲಿಂದ ತುಸು ಮುಂದಕ್ಕೆ ಕೂಡ ಒಂದು ಕಡೆ ರಸ್ತೆ ಬಿರುಕು ಬಿಟ್ಟಿದೆ. ಹೆದ್ದಾರಿ ಇನ್ನೂ ಕೆಲವೆಡೆ ಮಣ್ಣು ಸಡಿಲಗೊಂಡು, ಮಧ್ಯೆಯೇ ಕುಸಿದಿರುವುದು ಕಂಡುಬರುತ್ತಿದೆ.

ಪ್ರಾಣಕ್ಕೆ ಕಂಟಕ: ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನ ಸಂಚರಿಸುತ್ತಿದ್ದು, ವಾಹನಗಳಿಗೆ ಸೈಡ್ ಕೊಡುವ ವೇಳೆ ಅಪ್ಪಿ ತಪ್ಪಿ ರಸ್ತೆ ಬದಿಗೆ ಬಂದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ದ್ವಿಚಕ್ರ ವಾಹನ ಸವಾರರಿಗೆ ಪ್ರಾಣಕ್ಕೆ ಕಂಟಕವಾಗುವ ಆತಂಕವೂ ಇದೆ. 3 ವರ್ಷದ ಹಿಂದೆ ತಲ್ಲೂರಿನಿಂದ ಮುಂದಕ್ಕೆ, ರಾಜಾಡಿ ಸೇತುವೆಗಿಂತ ಸ್ವಲ್ಪ ಹಿಂದೆ ಸುಮಾರು ದೂರ ಮಳೆಗಾಲದ ವೇಳೆ ಮಣ್ಣು ಸಡಿಲಗೊಂಡು, ಬಿರುಕು ಬಿಟ್ಟಿತ್ತು. ಮಳೆಗಾಲದ ಬಳಿಕ ಸರಿಪಡಿಸಲಾಗಿದ್ದರೂ, ಪೂರ್ಣ ಪ್ರಮಾಣದಲ್ಲಿ ಸರಿ ಆದಂತಿಲ್ಲ. ಸಂಬಂಧಪಟ್ಟ ಹೆದ್ದಾರಿ ಇಲಾಖೆ ಈ ಬಗ್ಗೆ ಗಮನಹರಿಸಿ, ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿಯವರಿಗೆ ಈ ಬಗ್ಗೆ ಸೂಚನೆ ನೀಡಿ, ಸರಿಪಡಿಸಲು ಕ್ರಮಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಲ್ಲಿಲ್ಲಿ ಗುಂಡಿ: ಮಳೆಗಾಲದಲ್ಲಿ ಪ್ರತಿವರ್ಷ ರಾ.ಹೆ ಎಲ್ಲೆಡೆ ಹೊಂಡ ಗುಂಡಿ ನಿರ್ಮಾಣವಾಗುತ್ತಿದ್ದು, ಅವೈಜ್ಞಾನಿಕ ತೇಪೆ ಕಾರ್ಯ ನಡೆಯುತ್ತಿದೆ. ಇದರಿಂದ ರಸ್ತೆಯಲ್ಲಿ ಉಬ್ಬು ತಗ್ಗು ನಿರ್ಮಾಣವಾಗುತ್ತಿದ್ದು, ತೇಪೆ ಎದ್ದು ಹೊಂಡ ಗುಂಡಿ ಕಾಣಿಸಿಕೊಳ್ಳುತ್ತಿದೆ. ಇದು ಹಳೇ ಕಾಲದ ರಾಷ್ಟ್ರೀಯ ಹೆದ್ದಾರಿ ಸ್ಥಿತಿ ನೆನೆಪಿಸುವಂತಿದೆ. ಕುಂದಾಪುರದಿಂದ ಬೈಂದೂರುವರೆಗೆ ರಾ.ಹೆ. ಕಾಮಗಾರಿ ಪೂರ್ಣಗೊಂಡು ಸುಮಾರು 5 ವರ್ಷ ಕಳೆದರೂ ಈವರೆಗೆ ಸಂಪೂರ್ಣವಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಿಲ್ಲ. ಅಲ್ಲಲ್ಲಿ 50-100 ಮೀಟರ್ ಮರು ಡಾಂಬರೀಕರಣ ನಡೆದಿದ್ದು ಬಿಟ್ಟರೆ ಸಂಪೂರ್ಣವಾಗಿ ಮರು ಡಾಂಬರೀಕರಣ ಆಗಿಲ್ಲ.

ಮಣ್ಣು ಕುಸಿತ ಭೀತಿ

ಮಣ್ಣು ಸಮತಟ್ಟು ಮಾಡದೇ, ಕೇವಲ ಮರು ಡಾಂಬರೀಕರಣ ಮಾಡಿ ಮುಗಿಸಿದ್ದು, ಇದರಿಂದ ಕುಸಿದ ಭಾಗ ಹಾಗೆಯೇ ಇದೆ. ಇದು ಕಳೆದ ಅನೇಕ ತಿಂಗಳಿನಿಂದ ಕುಸಿಯುತ್ತಿದ್ದು, ಈಗ ಸುಮಾರು ಮೀಟರ್‌ಗಳವರೆಗೆ ದೊಡ್ಡ ಬಿರುಕು ಬಿಟ್ಟಂತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಮರು ಡಾಂಬರೀಕರಣ, ಅಭಿವೃದ್ಧಿಗೊಂಡಿಲ್ಲ.

ಕುಂದಾಪುರ-ಬೈಂದೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಅನೇಕ ಕಡೆಗಳಲ್ಲಿ ಕುಸಿತ ಉಂಟಾಗುತ್ತಿದ್ದು, ಹೆದ್ದಾರಿ ಮಧ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಹೊಂಡ ಮುಚ್ಚಲು ಹಾಕಿದ ತೇಪೆ ಎದ್ದು ಹೋಗಿ ಮತ್ತೆ ಹೊಂಡ ಕಾಣಿಸಿಕೊಳ್ಳುತ್ತಿದೆ. ರಾ.ಹೆ. ಕಾಮಗಾರಿ ಮುಗಿದ ಬಳಿಕ ಈವರೆಗೆ ಸಂಪೂರ್ಣವಾಗಿ ಮರು ಡಾಂಬರೀಕರಣಗೊಂಡಿಲ್ಲ ಹಾಗೂ ಅಭಿವೃದ್ಧಿಯೂ ಆಗಿಲ್ಲ. ಸಂಬಂಧಪಟ್ಟ ಹೆದ್ದಾರಿ ಇಲಾಖೆ ಈ ಬಗ್ಗೆ ಗಮನಹರಿಸಿ ದುರಸ್ತಿಗೊಳಿಸಬೇಕು. ಗಣೇಶ್ ತಲ್ಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net