

ಬೆಂಗಳೂರು: ಬಾಲ ಸನ್ಯಾಸಿಗಳನ್ನು ಮಠದ ಪೀಠಾಧಿಪತಿಗಳ ಸ್ಥಾನಕ್ಕೆ ನೇಮಕ ಮಾಡುವುದನ್ನು ನಿರ್ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಅಪ್ರಾಪ್ತನನ್ನು ಉಡುಪಿಯ ಶೀರೂರು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ, ಶೀರೂರು ಮಠ ಭಕ್ತ ಸಮಿತಿಯ ಕಾರ್ಯದರ್ಶಿ ಪಿ.ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿರುವ ಪಿಐಎಲ್ ಅನ್ನು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರು ಹಾಗೂ ಮಠದ ಪರ ವಕೀಲರ ವಾದ ಆಲಿಸಿದ ಪೀಠ, ಇದೊಂದು ಗಂಭೀರ ವಿಚಾರವಾಗಿದೆ. ಬಾಲ ಸನ್ಯಾಸಿಗಳು ಮಠದ ಪೀಠಾಧಿಪತಿಗಳಾಗುವುದನ್ನು ನಿರ್ಬಧಿಸಬಹುದೇ, ಈ ವಿಚಾರದಲ್ಲಿ ಶಾಸನಗಳು ಏನು ಹೇಳುತ್ತವೆ. ಶಂಕರಾಚಾರ್ಯರು ಸೇರಿ ಬಹುತೇಕ ಆಚಾರ್ಯರು ಬಾಲ್ಯದಲ್ಲಿಯೇ ಪೀಠಾಧಿಪತಿಗಳಾಗಿದ್ದಾರೆ. ಬೌದ್ಧ ಧರ್ಮದಲ್ಲೂ ಅಪ್ರಾಪ್ತರನ್ನು ಭಿಕ್ಕುಗಳಾಗಿ ಮಾಡಲಾಗುತ್ತದೆ. ಇದನ್ನು ನಿರ್ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಕೇಳಿತಲ್ಲದೆ, ಈ ಬಗ್ಗೆ ಸಿವಿಲ್ ದಾವೆ ಹೂಡಬಹುದಲ್ಲವೇ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.
ಅರ್ಜಿದಾರರ ಪರ ವಕೀಲರು ಪ್ರತಿಕ್ರಿಯಿಸಿ, ಇದರಲ್ಲಿ ಮಕ್ಕಳ ಹಕ್ಕುಗಳ ವಿಚಾರ ಸೇರಿ ಅನೇಕ ವಿಚಾರಗಳಿವೆ. ಅಪ್ರಾಪ್ತರು ಕೈಗೊಳ್ಳುವ ಯಾವುದೇ ನಿರ್ಧಾರಗಳಿಗೆ ಕಾನೂನಿನಲ್ಲಿ ಮಾನ್ಯತೆ ಇರುವುದಿಲ್ಲ. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಹ ಹಲವು ತೀರ್ಪಗಳನ್ನು ನೀಡಿದೆ. ಆದ್ದರಿಂದ, ಎಲ್ಲವನ್ನೂ ಪರಿಶೀಲಿಸಿ, ಈ ವಿಚಾರವನ್ನು ನ್ಯಾಯಾಲಯ ತೀರ್ವನಿಸಬೇಕು ಎಂದು ಮನವಿ ಮಾಡಿದರು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, ವಿಚಾರಣೆ ಮುಂದೂಡಿದ ಹೈಕೋರ್ಟ್, ಸೆ.23ರಂದು ಅಂತಿಮ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಅಮಿಕಸ್ ಕ್ಯೂರಿ ನೇಮಕ: ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಸೂಕ್ತ ಸಲಹೆ ಹಾಗೂ ಸಹಕಾರ ನೀಡಲು ಹಿರಿಯ ವಕೀಲ ಎಸ್.ಎಸ್. ನಾಗಾನಂದ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಿದ ಪೀಠ, ಅರ್ಜಿಯ ಪ್ರತಿ ಹಾಗೂ ಇತರ ದಾಖಲೆಗಳನ್ನು ಅಮಿಕಸ್ ಕ್ಯೂರಿಗೆ ಒದಗಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.
ತಲೆಮಾರುಗಳಿಂದ ಬಂದಿರುವ ಪದ್ಧತಿ: ಸೋದೆ ವಾದಿರಾಜ ಮಠದ ಪರ ವಕೀಲರು ವಾದ ಮಂಡಿಸಿ, ಉಡುಪಿಯ ಅಷ್ಟ ಮಠಗಳಲ್ಲಿ ಬಾಲ ಸನ್ಯಾಸಿಗಳ್ನು ಪೀಠಾಧಿಪತಿಗಳನ್ನಾಗಿ ನೇಮಕ ಮಾಡುವ ಪರಂಪರೆಯೇ ಇದೆ. ಮಧ್ವ ಪರಂಪರೆಯಂತೆ ಬಾಲ ಸನ್ಯಾಸಿಗಳನ್ನು ಪೀಠಾಧಿಪತಿಯಾಗಿ ನೇಮಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಬಾಲ ಸನ್ಯಾಸಿಗಳಿಗೆ ದೀಕ್ಷೆ ಕೊಡಿಸಿ, ಧರ್ಮಶಾಸ್ತ್ರ, ವೇದ, ಉಪನಿಷತ್ ಬೋಧಿಸಿ ಪೀಠಾಧಿಪತಿಗಳನ್ನಾಗಿಸಲಾಗುತ್ತದೆ. ಇದು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಇದರಲ್ಲಿ ಯಾವುದೇ ಬಲವಂತ ವಿರುವುದಿಲ್ಲ. ಬಾಲ ಸನ್ಯಾಸಿಗಳನ್ನು ಪೀಠಾಧಿಪತಿ ಯನ್ನಾಗಿಸಲು ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ವಿವರಿಸಿದರು.
ಮನವಿ ಏನು?: ಶೀರೂರು ಮಠದ ಪೀಠಾಧಿಪತಿಯಾಗಿ ನೇಮಕಗೊಂಡಿರುವ ಅಪ್ರಾಪ್ತನ ಹಕ್ಕುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ನಿರ್ದೇಶಿಸಬೇಕು. ಅಪ್ರಾಪ್ತರ ಮೇಲೆ ಸನ್ಯಾಸತ್ವ ಹೇರುವ ‘ಬಾಲಸನ್ಯಾಸ’ ಪದ್ಧತಿಯಿಂದ ಅಪ್ರಾಪ್ತರ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಘೊಷಿಸಬೇಕು.‘ಬಾಲಸನ್ಯಾಸ’ ಪದ್ಧತಿಗೆ ಕಡಿವಾಣ ಹಾಕಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನಿರ್ದೇಶಿಸಬೇಕು. ಶೀರೂರು ಮಠದ ಪೀಠಾಧಿಪತಿ ಸ್ಥಾನಕ್ಕೆ ಅಪ್ರಾಪ್ತರನ್ನು ನೇಮಕ ಮಾಡಿರುವ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರ ಕ್ರಮ ಕಾನೂನು ಬಾಹಿರ ಎಂದು ಘೋಷಿಸಬೇಕು ಅಥವಾ ಶೀರೂರು ಮಠಕ್ಕೆ ಪೀಠಾಧಿಪತಿ ನೇಮಕ ಮಾಡಲು ವಿಶ್ವವಲ್ಲಭ ತೀರ್ಥ ಸ್ವಾಮೀಜಿಗೆ ಅಧಿಕಾರವಿಲ್ಲ ಎಂದು ಘೊಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.