ಸರ್ಕಾರ ಇದೆಯೋ? ಇಲ್ಲವೋ ?

CTD GOVINDA KARAJOLA
Published on

ಹುಬ್ಬಳ್ಳಿ : ರಾಜ್ಯದಲ್ಲಿ ಸಂವಿಧಾನತ್ಮಕಾಗಿ ರಚನೆಯಾದ ಸರ್ಕಾರ ಇದೆಯೋ ಅಥವಾ ಇಲ್ಲವೋ ಎಂಬ ಸಂಶಯ ಇದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ನಗರದಲ್ಲಿ ಶನಿವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ವಕ್ಪ್ ಬೋರ್ಡ್ ತಿದ್ದುಪಡಿ ಮಸೂದೆ ಅಧ್ಯಕ್ಷ ಜಗದಾಂಬಿಕಾ ಪಾಲ್ ಹುಬ್ಬಳ್ಳಿಗೆ ಬಂದಿದ್ದಾಗ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡದೇ ನಿಯಮ ಉಲ್ಲಂಘಿಸಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಗದಾಂಬಿಕಾ ಪಾಲ್ ಬಗ್ಗೆ ಹಗುರವಾಗಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರಕ್ಕೆ ಸಂವಿಧಾನದ ಮೇಲೆ ಗೌರವ ಇಲ್ಲ. ಸರ್ಕಾರದ ವರ್ತನೆ ಖಂಡನೀಯ ಎಂದರು.

ಸಿದ್ದರಾಮಯ್ಯ ಸರ್ಕಾರ ಹಗರಣದಲ್ಲಿ ಮುಳುಗಿದ್ದು, ರಾಜ್ಯ ಆರ್ಥಿಕ ದಿವಾಳಿಯಾಗಿದೆ. 25 ಸಾವಿರ ಕೋಟಿ ಎಸ್​ಸಿ-ಎಸ್​ಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ವಾಲ್ಮೀಕಿ ಹಗರಣದ ದುಡ್ಡು ಲೋಕಸಭೆ ಚುನಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ. ಇದೀಗ ಉಪಚುನಾವಣೆಗೂ ಅದೇ ಹಣ ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಸಂಡೂರಿನ ಜನ ಮಾತಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಸರ್ಕಾರಿ ಎಸ್​ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮುನ್ನ ಬರೆದ ಪತ್ರದಲ್ಲಿ ಸಚಿವರ ಆಪ್ತರ ಹೆಸರು ಇದೆ ಎಂದರು.

ಹಗರಣದಲ್ಲಿ ಮುಳುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅವರ ಮೇಲೆ ಎಫ್​ಐಆರ್ ದಾಖಲು ಮಾಡಬೇಕು. ಈ ಹಿಂದೆ ಈಶ್ವರಪ್ಪ ಹೆಸರು ಹಗರಣದಲ್ಲಿ ಕೇಳಿ ಬಂದಾಗ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ, ಈಗ ಯಾಕೆ ರಾಜೀನಾಮೆ ನೀಡುತ್ತಿಲ್ಲ ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸರ್ಕಾರ ಅಲ್ಪಾವಧಿ ಸರ್ಕಾರ. ಈ ಸರ್ಕಾರ ಬಹಳ ದಿನ ಇರುವುದಿಲ್ಲ ಎಂದು ಭವಿಷ್ಯ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net