ಜಸ್ಟೀಸ್​​ಗಳ ವಸತಿಗೃಹಕ್ಕೆ ಪಶು ವಿಶ್ವವಿದ್ಯಾಲಯದ ಜಾಗ ಗುರುತು ?

Published on

ಬೆಂಗಳೂರು: ಮಹಾನಗರದ ಏರ್‌ಪೋರ್ಟ್ ರಸ್ತೆಯಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಜಾನುವಾರು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ (ಕೆವಿಎಎಫ್​​ಯು) ಹೆಬ್ಬಾಳದ ವೆಟರಿನರಿ ಕಾಲೇಜಿನ 4 ಎಕರೆ ಜಾಗವನ್ನು ಹೈಕೋರ್ಟ್ ಜಡ್ಜ್‌ಗಳ ವಸತಿಗೃಹ ನಿರ್ಮಾಣಕ್ಕೆ ಬಳಸಿಕೊಳ್ಳುವ ಕುರಿತು ಆಕ್ಷೇಪ ವ್ಯಕ್ತವಾಗಿದೆ.

ಪ್ರಸ್ತುತ ಹೆಬ್ಬಾಳದಲ್ಲಿರುವ ನ್ಯಾಯಗ್ರಾಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ವಸತಿಗೃಹ ನಿರ್ಮಿಸಿದ್ದು, ಅಲ್ಲಿ ಹಲವು ಜಡ್ಜ್‌ಗಳು ವಾಸ್ತವ್ಯ ಹೂಡಿದ್ದಾರೆ. ಇದಕ್ಕೆ ಹೊಂದಿಕೊಂಡಿರುವ ಪಶು ವಿವಿಯ ಜಾಗದಲ್ಲಿ 4 ಎಕರೆ ಜಮೀನನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಾಗುತ್ತಿದೆ. ಇದಕ್ಕೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿಲ್ಲ. ಆದರೂ, ಮುಖ್ಯ ಕಾರ್ಯದರ್ಶಿಗಳ ಮೌಖಿಕ ಸೂಚನೆ ಮೇರೆಗೆ ಉದ್ದೇಶಿತ ಜಾಗವನ್ನು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು, ನಗರ ಜಿಲ್ಲಾಧಿಕಾರಿ, ತಹಸೀಲ್ದಾರ್ ಸ್ಥಳಪರಿಶೀಲನೆ ನಡೆಸಿ ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.

ಈ ಪ್ರಸ್ತಾಪವು ವಿವಿಯ ಕಾರ್ಯಚಟುವಟಿಕೆ ಹಾಗೂ ಭವಿಷ್ಯದ ಕಾರ್ಯಕ್ರಮಗಳಿಗೆ ಅಡ್ಡಿಯಾಗಲಿದೆ ಎಂದು ಪ್ರತಿಪಾದಿಸಲಾಗಿದೆ. ಇದೇ ಜಾಗವನ್ನು ಜಾನುವಾರುಗಳಿಗಾಗಿಯೇ ಪ್ರತ್ಯೇಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಜಮೀನು ಗುರುತು ಮಾಡಲಾಗಿದೆ. ದೇಶದಲ್ಲೇ ಬೃಹತ್ ಹಾಗೂ ಅತ್ಯಾಧುನಿಕ ಆಸ್ಪತ್ರೆ ಒಳಗೊಂಡ ಪ್ರಯೋಗಾಲಯ ಹಾಗೂ ಸಂಶೋಧನಾ ಚಟುವಟಿಕೆಗೆ ಈ ಕೇಂದ್ರವನ್ನು ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಸಂಬಂಧಿಸಿ 2024ರ ಜ.25ರಂದು ವಿವಿಯ ಆಡಳಿತ ಮಂಡಳಿಯ 112ನೇ ಸಭೆಯಲ್ಲಿ ಒಪ್ಪಿಗೆ ನೀಡಿ, ನಂತರ ಸರ್ಕಾರದ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ.

ಅನ್ಯ ಉದ್ದೇಶಕ್ಕೆ ಬಳಕೆಗೆ ಅವಕಾಶ ಇಲ್ಲ:

ಉದ್ದೇಶಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು 7 ಎಕರೆಯಲ್ಲಿ ತಲೆಯೆತ್ತಲಿದೆ. ಇದಕ್ಕಾಗಿ ಆರಂಭಿಕವಾಗಿ 50 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದೆ. ಇಲ್ಲಿ ಎಲ್ಲ ಬಗೆಯ ಜಾನುವಾರುಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಅಡಿಯಲ್ಲಿ ಚಿಕಿತ್ಸೆ, ಆರೈಕೆ ಕೇಂದ್ರ, ಪ್ರಯೋಗಾಲಯ, ಲಸಿಕೆ ಕೇಂದ್ರ, ಸಂಶೋಧನಾ ಚಟುವಟಿಕೆ ನಡೆಸಲು ಅವಕಾಶ ಇರಲಿದೆ. ಈ ಉದ್ದೇಶಕ್ಕಾಗಿ ಹಾಲಿ ಜಾಗವನ್ನು ವಿವಿ ಸಂಶೋಧನಾ ಕಾರ್ಯಕ್ಕೆ ಬಳಸುತ್ತಿರುವುದರಿಂದ ಆಸ್ಪತ್ರೆ ನಿರ್ಮಾಣಕ್ಕೆ ತೊಂದರೆ ಆಗದು. ಆದರೆ, ವಸತಿಗೃಹ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಬಹುದಿನಗಳ ಆಸ್ಪತ್ರೆ ಕನಸು ಕಮರಲಿದೆ. ಮುಖ್ಯವಾಗಿ ವಿವಿಯ ಜಾಗವನ್ನು ಮೈಸೂರು ಸಂಸ್ಥಾನವು ದಾನವಾಗಿ ನೀಡಿದ್ದು, ವೆಟರಿನರಿ ಸಂಶೋಧನೆಗೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ಇಲ್ಲ. ಈ ವಿಷಯವನ್ನು ವಿವಿ ಕುಲಪತಿಯವರು ಸರ್ಕಾರಕ್ಕೆ ತಿಳಿಸಿದ್ದರೂ, ಜಾಗ ಬಿಟ್ಟುಕೊಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ವಿವಿಯ ಹಳೆಯ ವಿದ್ಯಾರ್ಥಿಗಳ ಸಂಘವು ಆಕ್ಷೇಪ ಎತ್ತಿದೆ.

ಸಂಶೋಧನೆಗೆ ಅಡಚಣೆ:

ಜಾನುವಾರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾದಲ್ಲಿ ಬೆಂಗಳೂರಿಗೆ ಅತ್ಯಾಧುನಿಕ ವೆಟರಿನರಿ ಹಾಸ್ಪಿಟಲ್ ಸೌಲಭ್ಯ ಸಿಗಲಿದೆ. ಸದ್ಯ ಇಂತಹ ಆಸ್ಪತ್ರೆ ಚೆನ್ನೈ ಹಾಗೂ ಮುಂಬೈನಲ್ಲಿ ಮಾತ್ರ ಇದೆ. ಆಧುನಿಕ ಚಿಕಿತ್ಸಾ ಪದ್ಧತಿ ಜತೆಗೆ ಎಂಆರ್‌ಐ ಸ್ಕ್ಯಾನಿಂಗ್, ಡಿಜಿಟಲ್ ಎಕ್ಸ್‌ರೇ, ಪೆಟ್ ಪಾರ್ಕ್ ಸೌಲಭ್ಯ ಕಲ್ಪಿಸಲಾಗುತ್ತದೆ. ಇವು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ವಿಧಿಸುತ್ತಿದ್ದು, ಹೊಸ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಸೌಲಭ್ಯ ಸಿಗಲಿದೆ. ಜತೆಗೆ ಹಾಲಿ ಜಾಗವು ಮೇವು ಸಹಿತ ವಿವಿಧ ಜಾನುವಾರುಗಳ ಸಾಕಣೆಯ ವಿಧಿ, ವಿಧಾನಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಇದಕ್ಕೆ ಪ್ರಶಾಂತ ವಾತಾವರಣ ಬೇಕಿದ್ದು, ಅನ್ಯ ಇಲಾಖೆಗೆ ಜಮೀನು ಬಿಟ್ಟುಕೊಟ್ಟಲ್ಲಿ ಮೂಲಉದ್ದೇಶಕ್ಕೆ ಅಡ್ಡಿಯಾಗಲಿದೆ ಎಂದು ವಿಶ್ರಾಂತ ಡೀನ್ ಡಾ. ಎಂ.ಎಸ್.ವಸಂತ್ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಪಶುವೈದ್ಯಕೀಯ ಹಾಗೂ ಜಾನುವಾರು ಸಂರಕ್ಷಣೆಗಾಗಿ ಮೈಸೂರು ರಾಜಸಂಸ್ಥಾನವು ನೀಡಿದ ಜಾಗದಲ್ಲಿ ವಿವಿ ನಡೆಯುತ್ತಿದೆ. ಈ ರೀತಿ ದಾನವಾಗಿ ಪಡೆದ ಜಾಗದಲ್ಲಿ ಅದೇ ಉದ್ದೇಶಕ್ಕೆ ಮಾತ್ರ ಬಳಸಬೇಕೆ ವಿನಾ ಅನ್ಯ ಕಾರ್ಯಕ್ಕೆ ಬಳಸುವಂತಿಲ್ಲ ಎಂಬ ನಿಯಮವಿದೆ. ಆದರೂ, ಸರ್ಕಾರ ಸಂಶೋಧನೆಗೆ ಮೀಸಲಾದ ಜಾಗವನ್ನು ವಸತಿಗೃಹ ನಿರ್ಮಿಸಲು ಅವಕಾಶ ಮಾಡಿಕೊಡಲು ಹೊರಟಿರುವುದು ಸರಿಯಲ್ಲ.

- ಡಾ. ಎನ್.ಕೆ. ರೈ, ಪಶುವೈದ್ಯಕೀಯ ಕ್ಷೇತ್ರದ ಕಾನೂನು ಸಲಹೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net