ಸ್ಥಾವರಕ್ಕೆ ಭಾರವಾಯಿತೇ ಬಾಧಿತ ಗ್ರಾಮಗಳ ತೆರಿಗೆ ?

Is the tax of the affected villages heavy for the plant1
ಕೂಡಗಿ ಎನ್​ಟಿಪಿಸಿಯ ಸಾಂದರ್ಭಿಕ ಚಿತ್ರ.
Published on

ಗೊಳಸಂಗಿ: ಸರ್ಕಾರದ ಅನುದಾನ, ಗ್ರಾಮಸ್ಥರ ಕರದ ಜತೆಗೆ ಸಮೀಪದ ಕೂಡಗಿ ಎನ್​ಟಿಪಿಸಿಯ ತೆರಿಗೆ ಹಣದಿಂದ ಬರಪೂರ ಅಭಿವೃದ್ಧಿಯ ಕನಸು ಕಾಣುತ್ತಿದ್ದ ಉಷ್ಣ ವಿದ್ಯುತ್​ ಸ್ಥಾವರ ವ್ಯಾಪ್ತಿಯ ಐದು ಗ್ರಾಮಗಳಿಗೆ ಈಗ ಎನ್​ಟಿಪಿಸಿ ತೆರಿಗೆ ಹಣ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಕೂಡಗಿ ಭಾಗದಲ್ಲಿ ಉಷ್ಣ ವಿದ್ಯುತ್​ ಸ್ಥಾವರ ನಿರ್ಮಾಣಕ್ಕಾಗಿ ದಶಕದ ಹಿಂದೆ ಈ ಭಾಗದ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಹಾಗೂ ಮುತ್ತಗಿ ಗ್ರಾಮದ ನೂರಾರು ರೈತರಿಗೆ 3 ಸಾವಿರಕ್ಕೂ ಅಧಿಕ ಎಕರೆ ಜಮೀನನ್ನು ಕೆಐಎಡಿಬಿ ಮೂಲಕ ಎನ್​ಟಿಪಿಸಿ ಭೂ ಸ್ವಾಧಿನ ಮಾಡಿಕೊಂಡಿತ್ತು.

ಸ್ವಾಧಿನ ಮಾಡಿಕೊಂಡ ಭೂಮಿಗೆ ಕರ್ನಾಟಕ ಪಂಚಾಯತ್​ ರಾಜ್​ ತೆರಿಗೆ ಕಾಯ್ದೆಯನ್ವಯ ಕಳೆದ 2017 ರಿಂದ ಪಂಚ ಗ್ರಾಮಗಳಿಗೆ ಎನ್​ಟಿಪಿಸಿಯು ಸಂಬಂಧಿಸಿದ ಗ್ರಾಪಂಗಳಿಗೆ ವಾರ್ಷಿಕ ತೆರಿಗೆಯನ್ನೂ ಕೂಡ ಪಾವತಿ ಮಾಡಿದೆ.

ಈ ಪೈಕಿ 2017&18 ರಿಂದ 2021&22 ರವರೆಗೆ ಕೂಡಗಿ ಗ್ರಾಪಂಗೆ 9,06,61,756 ರೂ., ಮಸೂತಿ ಗ್ರಾಪಂಗೆ 4,43,87,990 ರೂ., ತೆಲಗಿ ಗ್ರಾಪಂಗೆ 3,34,91,018 ರೂ., ಗೊಳಸಂಗಿ ಗ್ರಾಪಂಗೆ 2,72,72,787 ರೂ., ಮುತ್ತಗಿ ಗ್ರಾಪಂಗೆ 10.86.064 ರೂ., ಸೇರಿ ಒಟ್ಟು 19,68,99,615 ರೂ., ತೆರಿಗೆ ಹಣವನ್ನು ಎನ್​ಟಿಪಿಸಿ ವತಿಯಿಂದ ಈಗಾಗಲೇ ಪಾವತಿ ಮಾಡಲಾಗಿದೆ. ಜತೆಗೆ 2022&23 ಮತ್ತು 2023&24 ನೇ ಸಾಲಿನಲ್ಲಿ ಶೇ.50 ರಷ್ಟು ತೆರಿಗೆಯನ್ನೂ ಪಾವತಿ ಮಾಡಲಾಗಿದೆ.

ಪ್ರಸ್ತುತ ಸಮಸ್ಯೆ ಏನು? : ಕರ್ನಾಟಕ ಪಂಚಾಯತ್​ ರಾಜ್​ ಕಾಯ್ದೆಯನ್ವಯ ತೆರಿಗೆ ಪಡೆಯುವ ಗ್ರಾಮ ಪಂಚಾಯಿತಿಗಳು ಸಂಬಂಧಿಸಿದ ತೆರಿಗೆ ಪಾವತಿದಾರರಿಗೆ ನೀರು ಸರಬರಾಜು, ರಸ್ತೆ ಸುಧಾರಣೆ, ಶೌಚಗೃಹ ಹಾಗು ಶುಚಿತ್ವದ ಸೇವೆಯನ್ನು ಒದಗಿಸಬೇಕು. ಆದರೆ ತೆರಿಗೆ ಪಡೆಯುವ 5 ಗ್ರಾಮ ಪಂಚಾಯತಿಗಳಿಂದ ಕೂಡಗಿ ಎನ್​ಟಿಪಿಸಿ ಯಾವುದೇ ಸೇವೆಯನ್ನು ಇದುವರೆಗೂ ಪಡೆದಿರುವುದಿಲ್ಲ. ಹೀಗಾಗಿ ನಾವು ಯಾವುದೇ ಸೇವೆ ಪಡೆಯದೆ ಈ ಎಲ್ಲ ಗ್ರಾಪಂಗಳಿಗೆ ಇಷ್ಟೊಂದು ದೊಡ್ಡ ಪ್ರಮಾಣದ ತೆರಿಗೆ ನೀಡುತ್ತಿದ್ದೇವೆ. ಇದರಲ್ಲಿ ನಮಗೆ ಕೊಂಚ ರಿಯಾಯಿತಿ ನೀಡಬೇಕೆಂದು ಎನ್​ಟಿಪಿಸಿ ಕಳೆದ ಸೆಪ್ಟಂಬರ್​ ಸೇರಿ ಈ ಮೊದಲೊಮ್ಮೆ ಸಂಬಂಧಿಸಿದ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಸಾವಿರಾರು ಕೋಟಿ ರೂ. ಗಳ ಬೃಹತ್​ ಯೋಜನೆ ಹೊಂದಿದ ಕೂಡಗಿ ಎನ್​ಟಿಪಿಸಿಗೆ ಬಾಧಿತ ಗ್ರಾಪಂಗಳಿಗೆ ನೀಡುವ ತೆರಿಗೆ ಹಣ ಭಾರವಾಯಿತೇ? ಪ್ರತಿವರ್ಷ ಕೋಟ್ಯಂತರ ರೂ. ಹಣ ತೆರಿಗೆಯ ರೂಪದಲ್ಲಿ ಹರಿದು ಬರುತ್ತಿದ್ದ ಅನುದಾನ ಕಡಿತಗೊಂಡರೆ ಮುಂದೇನು ಎಂಬ ಆತಂಕ ಆಯಾ ಗ್ರಾಮ ಪಂಚಾಯಿತಿಗಳಿಗೆ ಶುರುವಾಗಿದೆ.

ತೆರಿಗೆ ಹಣ ಪಾವತಿಸುವುದು ಎನ್​ಟಿಪಿಸಿಗೆ ಹೊರೆ ಅಂತ ಏನಿಲ್ಲ. ಕೋಟ್ಯಂತರ ರೂ. ತೆರಿಗೆಯನ್ನು ಪ್ರತಿವರ್ಷ ಸಂಬಂಧಿಸಿದ ಗ್ರಾಪಂಗಳಿಗೆ ಪಾವತಿಸುತ್ತಿರುವ ಎನ್​ಟಿಪಿಸಿ ಆಯಾ ಗ್ರಾಪಂಗಳಿಂದ ನೀರು ಪೂರೈಕೆ, ರಸ್ತೆ, ಶೌಚಗೃಹ ಹಾಗೂ ಶುಚಿತ್ವ ಸೇರಿ ಯಾವುದೇ ಸೇವೆ ಪಡೆಯುತ್ತಿಲ್ಲ. ಹೀಗಾಗಿ ಈಗಾಗಲೇ ನೀಡುತ್ತಿರುವ ತೆರಿಗೆಯಲ್ಲಿ ಸ್ವಲ್ಪ ಕಡಿಮೆ ಮಾಡಬೇಕೆಂದು ಜಿಪಂ ಸಿಇಒ ಬಳಿ ಮೇಲ್ಮನವಿ ಸಲ್ಲಿಸಿದ್ದೇವೆ. ಅನ್ನಪ್ಪ ದೇವಮನೆ, ಡಿಜಿಎಂ, ಆರ್​ ಆ್ಯಂಡ್​ ಆರ್​&ಸಿಎಸ್​ಆರ್​ ಯೋಜನೆ, ಎನ್​ಟಿಪಿಸಿ ಕೂಡಗಿ

ಅನ್ನಪ್ಪ ದೇವಮನೆ, ಡಿಜಿಎಂ, ಆರ್​ ಆ್ಯಂಡ್​ ಆರ್​&ಸಿಎಸ್​ಆರ್​ ಯೋಜನೆ, ಎನ್​ಟಿಪಿಸಿ ಕೂಡಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net