ಲೋಕಾಯುಕ್ತ ನ್ಯಾಯಮೂರ್ತಿ ತಾಳಿಕೋಟೆಗೆ ಸೀಮಿತವಾದರಾ?, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಪ್ರಶ್ನೆ

LOKAYUKTR AND SHRANU SABARAD
LOKAYUKTA AND SHRANU SABARAD
Published on

ವಿಜಯಪುರ: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳು ಕೇವಲ ತಾಳಿಕೋಟೆಗೆ ಮಾತ್ರ ಸೀಮಿತರಾದರಾ?

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲರು ಇತ್ತೀಚೆಗೆ ತಾಳಿಕೋಟೆ ಹಾಗೂ ಮುದ್ದೇಬಿಹಾಳಕ್ಕೆ ಮಾತ್ರ ಹೆಚ್ಚಿಗೆ ಭೇಟಿ ನೀಡುತ್ತಿದ್ದು, ಅಲ್ಲಿಯೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯುತ್ತಿದ್ದಾರೆ. ಹೀಗಾಗಿ ಲೋಕಾಯುಕ್ತ ನ್ಯಾಯಮೂರ್ತಿಗಳು ತಾಳಿಕೋಟೆಗೆ ಮಾತ್ರ ಸೀಮಿತರಾದರಾ ಅಥವಾ ತಾಳಿಕೋಟೆಯೇ ಇಡೀ ಕರ್ನಾಟಕ ಎಂದು ಭಾವಿಸಿದರಾ ಎಂದು ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಅನುಮಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪ್ರವಾಸ ಎಂದು ಅಧಿಕೃತವಾಗಿ ಪ್ರವಾಸ ಕಾರ್ಯಕ್ರಮವನ್ನು ಪ್ರಕಟಿಸುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲರು ತಾಳಿಕೋಟೆ, ಮುದ್ದೇಬಿಹಾಳದಲ್ಲಿಯೇ ಉಳಿದುಕೊಂಡು ಅಲ್ಲಿಯೇ ಅಧಿಕಾರಿಗಳ ಸಭೆ ನಡೆಸುತ್ತಿರುವ ಕಾರಣ ಹೀಗೊಂದು ಅನುಮಾನ ಸಹಜವಾಗಿಯೇ ನಾನೂ ಸೇರಿದಂತೆ ಸಾರ್ವಜನಿಕರನ್ನು ಕಾಡುತ್ತಿದೆ. ಲೋಕಾಯುಕ್ತ ನ್ಯಾಯಮೂರ್ತಿಗಳು ತಿಂಗಳಿಗೊಮ್ಮೆಯಾದರೂ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆದರೆ, ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸುವುದಕ್ಕಿಂತ ಹೆಚ್ಚಾಗಿ ಮುದ್ದೇಬಿಹಾಳ-ತಾಳಿಕೋಟೆಯಲ್ಲಿಯೇ ಸಭೆ ನಡೆಸುತ್ತಿದ್ದಾರೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಸಮಸ್ಯೆಗಳೇ ಇಲ್ಲವಾ? ಅಥವಾ ತಾಳಿಕೋಟೆ-ಮುದ್ದೇಬಿಹಾಳದ ಸಮಸ್ಯೆಗಳನ್ನೇ ಇಡೀ ಜಿಲ್ಲೆಯ ಸಮಸ್ಯೆ ಎಂದು ಕೊಂಡರಾ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಅವುಗಳ ಕಡೆಗೆ ಗಮನ ಹರಿಸುವ ಅವಶ್ಯಕತೆ ಇದೆ. ಇನ್ನು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸುವ ಲೋಕಾಯುಕ್ತ ನ್ಯಾಯಮೂರ್ತಿಗಳು ಅಲ್ಲಿಯೂ ಸಹ ಮುದ್ದೇಬಿಹಾಳ ಮತ್ತು ತಾಳಿಕೋಟೆಯ ವಿಷಯಗಳನ್ನೇ ಪ್ರಸ್ತಾಪಿಸುತ್ತಾರೆ. ಇನ್ನುಳಿದ ತಾಲೂಕುಗಳ ಬಗ್ಗೆ ಗಮನ ಹರಿಸಿದ್ದು ಅಷ್ಟಕ್ಕಷ್ಟೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನೂ ಮುದ್ದೇಬಿಹಾಳ ಇಲ್ಲವೇ ತಾಳಿಕೋಟೆಗೆ ಕರೆಯಿಸಿಕೊಳ್ಳುತ್ತಿದ್ದಾರೆ. ಅದರ ಬದಲು ಪ್ರತಿ ತಿಂಗಳಿಗೊಮ್ಮೆ ಬೇರೆ ಬೇರೆ ತಾಲೂಕುಗಳಲ್ಲಿಯೂ ಸಭೆ ನಡೆಸಬಹುದಲ್ಲವೇ? ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬಹುದಲ್ಲವೇ? ಎಂದ ಸಬರದ ಇನ್ನಾದರೂ ಲೋಕಾಯುಕ್ತ ನ್ಯಾಯಮೂರ್ತಿಗಳು ಇಂಡಿ, ಸಿಂದಗಿ, ಬಸವನಬಾಗೇವಾಡಿ, ಬಬಲೇಶ್ವರ ಮತ್ತಿತರ ಕಡೆಗಳಿಗೆ ಭೇಟಿ ನೀಡಲಿ. ವಾಸ್ತವ್ಯ ಹೂಡಲಿ. ಸ್ಥಳೀಯ ಜನರ ಸಮಸ್ಯೆ ಆಲಿಸಲಿ ಎಂಬುದು ಜನರ ಆಶಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net