ಅದೇನು ಗೋಲಿಯಾಟದ ಜಗಳವೇ?-ಈಶ್ವರಪ್ಪ ಪ್ರಶ್ನೆ

K.S. Eshwarappa
ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
Published on

ಶಿವಮೊಗ್ಗ: ಗೃಹ ಸಚಿವ ಡಾ. ಜಿ.ಪರಮೇಶ್ವರ್ ಒಮ್ಮೆ ಬಂದು ರಾಗಿಗುಡ್ಡದಲ್ಲಿ ಪರಿಶೀಲಿಸಲಿ. ತಲ್ವಾರ್, ಕಲ್ಲುಗಳಿಂದ ಹೇಗೆ ದಾಳಿ ನಡೆಸಿದರು ಎಂಬುದನ್ನು ಸ್ಥಳಿಯರಿಂದ ಮಾಹಿತಿ ಪಡೆಯಲಿ. ರಾಗಿಗುಡ್ಡದಲ್ಲಿ ನಡೆದಿದ್ದು ಗೋಲಿಯಾಟದ ಜಗಳವೇ? ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಪರಮೇಶ್ವರ್ ಕೇವಲ ಮುಸ್ಲಿಂ ಸಮಾಜಕ್ಕೆ ಮಾತ್ರ ಗೃಹ ಸಚಿವರಲ್ಲ, ಸಮಾಜದ ಎಲ್ಲರಿಗೂ ಅವರು ಸಚಿವರು. ಶಾಂತಿ ಸುವ್ಯವಸ್ಥೆಗೆ ಒತ್ತು ನೀಡಬೇಕಾದ್ದು ಅವರ ಧರ್ಮ ಎಂದು ತಿರುಗೇಟು ನೀಡಿದರು.
ಸಚಿವ ರಾಮಲಿಂಗಾರೆಡ್ಡಿ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೆ.ಎಸ್.ಈಶ್ವರಪ್ಪ, ಗೃಹಮಂತಿಗಳೂ ಆಗಿದ್ದ ಹಿರಿಯ ರಾಜಕಾರಣಿ ರಾಮಲಿಂಗಾರೆಡ್ಡಿ ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ಅವರು ಶಿವಮೊಗ್ಗಕ್ಕೆ ಬಂದು ಎಸ್ಪಿಯಿಂದ ಮಾಹಿತಿ ಪಡೆಯಲಿ. ಒಂದು ವೇಳೆ ಬಿಜೆಪಿಯವರೇ ವೇಷ ಬದಲಿಸಿಕೊಂಡು ಕಲ್ಲು ತೂರಿದ್ದಾರೆಂದು ಎಸ್ಪಿ ಹೇಳಿದರೆ ನಾನು ರಾಮಲಿಂಗಾರೆಡ್ಡಿ ಹೇಳಿದ್ದೆಲ್ಲವನ್ನೂ ಒಪ್ಪಿಕೊಳ್ಳುತ್ತೇನೆ. ಇದು ನನ್ನ ಸವಾಲು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net