ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಚಿನ್ನದ ಆಲೂಗೆಡ್ಡೆ ಬೆಳೆಯುತ್ತಿದ್ದಾರಾ? : ಪ್ರತಾಪ್ ಸಿಂಹ

PRATAP SIMHA
Published on

ಮೈಸೂರು: ಯುದ್ಧದ ಕ್ರೆಡಿಟ್ ಸೈನ್ಯಕ್ಕೆ ಸೇರಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಶುಕ್ರವಾರ ನಗರದಲ್ಲಿ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ತಿರುಗೇಟು ನೀಡಿದ ಅವರು, ಜನರ ತೆರಿಗೆ ದುಡ್ಡಲ್ಲಿ ಎರಡು ಸಾವಿರ ಕೊಟ್ಟು ನಾನೇ ಕೊಟ್ಟೆ ಅಂಥ ಯಾಕೆ ಹೇಳ್ತೀರಾ? ಅದರ ಕ್ರೆಡಿಟ್ ತೆರಿಗೆದಾರರಿಗೆ ಏತಕ್ಕೆ ಕೊಡುವುದಿಲ್ಲ? ಸಿದ್ದರಾಮನಹುಂಡಿಯಲ್ಲಿ ಚಿನ್ನದ ಆಲೂಗೆಡ್ಡೆ, ಚಿನ್ನದ ಕಬ್ಬು ಬೆಳೆದು ಅದರಲ್ಲಿ ಬಂದ ದುಡ್ಡನ್ನು ಜನಕ್ಕೆ ಕೊಡುತ್ತಿದ್ದೀರಾ? ನನ್ನ ಹೆಂಡ್ತಿಗೂ ಫ್ರೀ, ಮಹದೇವಪ್ಪ ಹೆಂಡ್ತಿಗೂ ಫ್ರೀ ಅಂತೀರಲ್ಲ ಆ ಫ್ರೀಗೆ ದುಡ್ಡು ಕೊಟ್ಟಿದ್ದು ಯಾರು? ಎಲ್ಲದಕ್ಕೂ ನಾನೇ ಕೊಟ್ಟಿದ್ದು ಅಂಥ ಯಾಕೆ ಕೊಚ್ಚಿ ಕೊಳ್ತೀರಾ? ಜನರು ಮೋದಿಯಂತಹ ಗಟ್ಟಿ ನಾಯಕತ್ವಕ್ಕೆ ಯುದ್ಧದ ಕ್ರೆಡಿಟ್ ಕೊಡ್ತಿದ್ದಾರೆ. ಈ ಹಿಂದೆ ಇಂದಿರಾಗಾಂಧಿಗೂ ಇಂತಹ ಕ್ರೆಡಿಟ್ ಕೊಟ್ಟಿರಲಿಲ್ಲವೇ? ಜನರು ಮೋದಿಗೆ ಕ್ರೆಡಿಟ್ ಕೊಟ್ರೆ ನಿಮಗೆ ಏತಕ್ಕೆ ಹೊಟ್ಟೆ ಉರಿ ಎಂದು ಪ್ರಶ್ನಿಸಿದರು.

ಮುಂಬೈ ದಾಳಿಯಾದಾಗ ಅಂದಿನ ಯುಪಿಎ ಸರ್ಕಾರ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸೇನೆಗೆ ಅವಕಾಶ ನೀಡಲಿಲ್ಲ. ಇಂದು ಸೈನಿಕರಿಗೆ ಸ್ವಾತಂತ್ರ್ಯ ವನ್ನು ನರೇಂದ್ರ ಮೋದಿ ನೀಡಿದ್ದಾರೆ. ಅದೇ ನಿಜವಾದ ನಾಯಕತ್ವ. ನೀವು ಮಾಡಲು ಆಗದ್ದನ್ನು ಮೋದಿ ಮಾಡಿದ್ದಾರೆ ಅಷ್ಟೇ ಎಂದರು.

ಬಲೂಚಿಸ್ತಾನಕ್ಕೆ ಭಾರತದೊಂದಿಗೆ ಸ್ವಾತಂತ್ರ್ಯ ಸಿಕ್ಕಿತ್ತು. ಆ ಸಂದರ್ಭದಲ್ಲಿಯೇ ಅವರು ಸೇರಲು ಆಸಕ್ತಿ ಹೊಂದಿದ್ದರು. ನೆಹರು ಅವರಂತಹ ಮೂರ್ಖ ನಾಯಕನಿಂದ ಬಲೂಚಿಗಳು ಅನಿವಾರ್ಯವಾಗಿ ಪಾಕಿಸ್ತಾನಕ್ಕೆ ಸೇರಿದರು. ಈಗ ಮೋದಿಯವರ ನಾಯಕತ್ವ ಇದೆ. ಈಗಲಾದರೂ ಅವರು ನಮ್ಮ ಜತೆಗೆ ಸೇರಲಿ ಎಂದು ಆಶೀಸುತ್ತೇವೆ. ಬಲೂಚಿಸ್ತಾನಕ್ಕೆ ಮೊದಲಿನಿಂದಲೂ ನಮ್ಮ ಜತೆಗೆ ಇರಬೇಕೆಂಬ ಆಸೆ ಇದೆ. ಅದು ಈಗಲಾದರೂ ಕೈಗೂಡಲಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net