ಸಿದ್ದರಾಮಯ್ಯ ಮುಸ್ಲಿಮರಿಗೆ ಮಾತ್ರ ಮುಖ್ಯಮಂತ್ರಿಯೆ?

Pralhad Joshi 3
Published on

ಹುಬ್ಬಳ್ಳಿ  : ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ಮಾತ್ರ ಮುಖ್ಯಮಂತ್ರಿಯೋ ? ಅಥವಾ ಇಡೀ ಕರ್ನಾಟಕಕ್ಕೆ ಮುಖ್ಯಮಂತ್ರಿ ಆಗಿದ್ದಾರೊ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸೋಮವಾರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿ ಇರುವವರೆಗೆ ಇಡೀ ಕರ್ನಾಟಕದ ಆಸ್ತಿ ನಿಮ್ಮ ಹೆಸರಿಗೆ ಬರೆದುಕೊಳ್ಳಿ ಎಂಬಂತೆ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಅದೇ ರೀತಿ ವರ್ತಿಸುತ್ತಿದ್ದಾರೆ. ದೇಶದ್ರೋಹ ದುಷ್ಕೃತ್ಯದಲ್ಲಿ ತೊಡಗಿ, ಜೈಲು ಸೇರಿದವರ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ಕಾಂಗ್ರೆಸ್ ಮೊದಲಿನಿಂದಲೂ ಭಯೋತ್ಪಾದನೆ ಬಗ್ಗೆ ಮೃದು ಧೋರಣೆ ತಾಳಿದೆ ಎಂದು ಆರೋಪಿಸಿದರು.

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಒಬ್ಬ ಮತಾಂಧ. ಆತ ಭಯೋತ್ಪಾದಕರನ್ನು ಕೊಲ್ಲದಿರುವಂತೆ ಹೇಳಿರುವುದರಲ್ಲಿ ಅಚ್ಚರಿ ಇಲ್ಲ. ಆದರೆ, ಕಾಂಗ್ರೆಸ್​ನ ಉಳಿದ ಮುಖಂಡರು ಸಹ ಅದೇ ರೀತಿ ವರ್ತಿಸುತ್ತಿದ್ದಾರೆ. ದೇಶದ್ರೋಹಿಗಳ ರಕ್ಷಣೆಗೆ ತೊಡಗಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಈ ಹಿಂದೆಯೂ ಕೆಲವರಿಗೆ ಮಾತ್ರ ಶಾದಿಭಾಗ್ಯ ಜಾರಿಗೊಳಿಸಿದ್ದರು. ಇದೀಗ, ವಕ್ಪ್ ಹೆಸರಿನಲ್ಲಿ ಆಸ್ತಿ ಲೂಟಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಇಡೀ ರಾಜ್ಯದ ಹಿತಾಸಕ್ತಿ ಕಾಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷದ ರಾಜಕಾರಣದಲ್ಲಿ ಸೋಲು ಕಂಡಿಲ್ಲ. ಗುಜರಾತ್​ನಲ್ಲಿ ಮೂರು ಬಾರಿ ಮುಖ್ಯಮಂತ್ರಿ ಆಗಿದ್ದ ಮೋದಿ, ಸತತ 3ನೇ ಬಾರಿ ಪ್ರಧಾನಿ ಆಗಿದ್ದಾರೆ. ಅಂತಹ ಪ್ರಬುದ್ಧ ರಾಜಕಾರಣಿ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದರು.

ಸಿಎಂ ಅರಿತುಕೊಳ್ಳಲಿ: ರಾಜ್ಯ ಸರ್ಕಾರದ ಮೇಲೆ ಪ್ರಧಾನಿ ಮೋದಿ ಅವರು 700 ಕೋಟಿ ರೂ. ಅಬಕಾರಿ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಜೋಶಿ, ರಾಜ್ಯ ಅಬಕಾರಿ ಸಚಿವರು ಮತ್ತು ಸರ್ಕಾರದ ಮೇಲೆ 700 ಕೋಟಿ ರೂ. ಭ್ರಷ್ಟಾಚಾರದ ಆರೋಪ ಹೊರಿಸಿದವರು ಪ್ರಧಾನಿ ಮೋದಿಯೂ ಅಲ್ಲ, ಬಿಜೆಪಿಯವರೂ ಅಲ್ಲ. ಅಬಕಾರಿ ಡೀಲರ್​ಗಳು ಎಂಬುದನ್ನು ಮೊದಲು ಮನನ ಮಾಡಿಕೊಳ್ಳಿ ಎಂದರು.

ಅಬಕಾರಿ ಡೀಲರ್ಸ್ ತಮ್ಮ ಸರ್ಕಾರದ ಒಂದು ಭಾಗ. ಈ ಹಂಚಿಕೆದಾರರೇ ಸಚಿವ ತಿಮ್ಮಾಪುರ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು, ಪ್ರಧಾನಿ ಮೋದಿ ಅವರು ಇದನ್ನು ಉಲ್ಲೇಖಿಸಿ ಮಾತಾಡಿದ್ದಾರೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಅರಿತುಕೊಳ್ಳಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net