ಕೋಟೆಕೇರಿ ದೇವಳ ಜೀರ್ಣೋದ್ಧಾರ ಎಂದು?

temple
ಜೀರ್ಣೋದ್ಧಾರಗೊಳ್ಳಲು ಬಾಕಿಯಿರುವ ಕೋಟೆಕೇರಿ ದೇವಸ್ಥಾನ
Published on

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ

ದೇವಾಲಯಗಳ ನಗರ ತುಳುನಾಡ ಹಂಪೆ ಎಂದು ಖ್ಯಾತಿ ಪಡೆದ ಬಾರಕೂರಿನಲ್ಲಿ ಪ್ರಸಿದ್ಧವಾದ ಮಹಾತೋಭಾರ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಮಗ್ರ ಜೀರ್ಣೋದ್ಧಾರ ಶೀಘ್ರವೇ ನಡೆಯಬೇಕಿದೆ.

ದೇವಳ ಆಡಳಿತ ಮೋಕ್ತೆಸರ ಮಂಜುನಾಥ್ ರಾವ್ ಈ ಕುರಿತು ಪ್ರತಿಕ್ರಿಯಿಸಿದ್ದು, ಕೋಟ್ಯಂತರ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳ ರೂಪಿಸುವುದರೊಂದಿಗೆ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ನೆರವೇರಿಸಲು ಪ್ರಯತ್ನಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಊರವರಿಂದ ಎಲ್ಲ ರೀತಿಯ ಸಹಕಾರ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು. ಸುಮಾರು 15 ವರ್ಷಗಳ ಹಿಂದೆ ದೇವಸ್ಥಾನ ಜೀರ್ಣೋದ್ಧಾರಗೊಂಡಿದ್ದು, ಸರ್ಕಾರದ ಯೋಜನೆಯೊಂದರ ಮೂಲಕ ಪ್ರಾಚ್ಯವಸ್ತು ಇಲಾಖೆ ವತಿಯಿಂದ ದೇವಸ್ಥಾನದ ಮುಖಮಂಟಪ ಮರು ನಿರ್ಮಾಣಗೊಂಡದ್ದು ಹೊರತುಪಡಿಸಿ ಇದುವರೆಗೆ ಜೀರ್ಣೋದ್ಧಾರ ಕಾರ್ಯಗಳು ನಡೆದಿಲ್ಲ. ಹಲವು ಸಂಘ ಸಂಸ್ಥೆಗಳು, ಊರ ಭಕ್ತರ ಸಹಕಾರದಲ್ಲಿ ದೇವಸ್ಥಾನಲ್ಲಿ ನಿತ್ಯ ಪೂಜೆ ನಡೆಯುತ್ತಿದ್ದು, ಇತರ ಯಾವುದೇ ಆದಾಯ ಮೂಲಗಳಿಲ್ಲ.

ದೇವಳದ ಇತಿಹಾಸ

ಚರಿತ್ರೆಯಲ್ಲಿ ತಿಳಿಸಿದ ಪ್ರಕಾರ ಮಾರ್ಕಾಂಡೇಯ ಮುನಿಯಿಂದ ಈ ದೇವಳ ಪ್ರತಿಷ್ಠಾಪನೆಗೊಂಡಿದ್ದು, ಕರಾವಳಿ ಸೀಮೆಯ ಅಧಿದೇವರು ಎಂದು ಖ್ಯಾತಿ ಪಡೆದಿದೆ. ಅಲ್ಲದೇ, ಕಾಂತಾರ ಚಿತ್ರದಲ್ಲೂ ಈ ದೇವಳದ ಮಹಿಮೆ ಕುರಿತು ತಿಳಿಸಲಾಗಿದೆ.

ದೇಶ-ವಿದೇಶದಲ್ಲಿರುವ ಬಾರಕೂರಿನ ಜನರ ಸಹಿತ ಸ್ಥಳೀಯ ದೇವಸ್ಥಾನಗಳ ಆಡಳಿತ ಮಂಡಳಿಯವರ, ಎಲ್ಲರನ್ನೂ ಒಂದುಗೂಡಿಸಿ ಸಮಗ್ರ ಜೀಣೋದ್ಧಾರ ಮಾಡಲು ಯೋಜನೆ ರೂಪಿಸಲಾಗಿದೆ. ಆ ಕುರಿತು ದೋಷ ನಿವಾರಣೆ, ಪ್ರಾಯಶ್ಚಿತ ನೆರವೇರಿಸಿ ಪ್ರಶ್ನಾಚಿಂತನೆಯ ಬಳಿಕ ಜೀಣೋದ್ಧಾರಕ್ಕೆ ಚಾಲನೆ ನೀಡಲಾಗುವುದು. -ಬಿ.ಶಾಂತಾರಾಮ ಶೆಟ್ಟಿ ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net