

ಕೆಜಿಎಫ್: ಅಮೃತ್ ಸಿಟಿ ಯೋಜನೆಯಡಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಕಾರ್ಯಕ್ರಮ ಹಳ್ಳ ಹಿಡಿದಿದ್ದು, ತಾಲೂಕಿನ ಪಾಲರ್ ಕೆರೆ 15 ದಿನಗಳಿಂದ ತುಂಬಿ ಕೋಡಿಹೊಡೆದು, ಕೆರೆಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರೂ ಕೆಜಿಎಫ್ ನಗರ ಜನತೆಗೆ ಕುಡಿಯುವ ನೀರು ಏಕೇ ಸರಬರಾಜು ಮಾಡುತ್ತಿಲ್ಲ ಎಂದು ಸಿಪಿಎಂನ ಸದಸ್ಯ ತಂಗರಾಜ್ ಪ್ರಶ್ನಿಸಿದರು.
ನಗರಸಭಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರಿನ ಪೂರೈಕೆಯ ಕೋಟ್ಯಂತರ ರೂಪಾಯಿ ಯೋಜನೆ ಹಳ್ಳ ಹಿಡಿದಿದ್ದು, ಶಾಸಕರು ಕೂಡಲೇ ಮಧ್ಯ ಪ್ರವೇಶಿಸಿ ನಗರದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಎಸ್.ರಾಜೇಂದ್ರನ್ ಮಾತನಾಡಿ, ಬೀದಿ ದೀಪಗಳ ನಿರ್ವಹಣೆಗೆ ಪ್ರತಿ ತಿಂಗಳು 3.70 ಲಕ್ಷ ರೂ.ಭರತ್ ಎಂಟರ್ಪೆಸಸ್ಗೆ ನೀಡುತ್ತಿದ್ದಾರೆ. 35 ವಾರ್ಡ್ಗಳ 50 ರಿಂದ 60 ಸೋಡಿಯಂ ಲೈಟ್ಗಳ ನಿರ್ವಹಣೆಗೆ 3.70 ಲಕ್ಷ ರೂ.ನೀಡುವುದರ ಕುರಿತು ನಗರಸಭೆ ಅಧಿಕಾರಿಗಳನ್ನು ಲೆಕ್ಕ ಕೇಳಿದರೆ ಆಮೇಲೆ ನೋಡೋಣ ಎನ್ನುತ್ತಾರೆ. ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದರ ಬಗ್ಗೆ ಪ್ರಶ್ನೆ ಮಾಡುವವರೇ ಇಲ್ಲದಂತಾಗಿದೆ. ಇತರೆ ಬಾಬತ್ತುಗಳಿಂದ ಭರತ್ ಎಂಟರ್ ಪೆಸಸ್ಗೆ ಕೋಟ್ಯಾಂತರ ರೂ. ಬಿಲ್ ಪಾವತಿಸುತ್ತಿದ್ದು ಇದನ್ನು ಪ್ರಶ್ನಿಸಬಾರದೇ ಎಂದು ಗುಡುಗಿದರು.
ರಸ್ತೆ ನಿರ್ಮಾಣಕ್ಕೆ ಪೂಜೆ, ರಸ್ತೆ ಒಡೆಯುವುದಕ್ಕೂ ಪೂಜೆ, ವರ್ಷಕ್ಕೆ ಎರಡು ಬಾರಿ ನಗರಸಭೆ ಕಚೇರಿಯ ಪೂಜೆಯ ಹೆಸರಿನಲ್ಲಿ ಜನರ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭೆ ಸದಸ್ಯೆಯರ ಗಂಡಂದಿರು ನಗರಸಭೆಯ ಡಿಡಿಟಿ ಪೌಡರ್ನಲ್ಲಿ ಅಕ್ರಮ ಎಸಗಿದ್ದಾರೆಂದು ಗಂಭೀರ ಆರೋಪ ಮಾಡಿದ ಮಾಜಿ ಶಾಸಕ ಎಸ್.ರಾಜೆಂದ್ರನ್ ಡಿಡಿಟಿ ಪೌಂಡರ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳ ಬಿಲ್ ಪಾವತಿ ಆಗಿದ್ದು, ಆದರೆ ನಗರದ 35 ವಾರ್ಡ್ಗಳಲ್ಲಿ ಡಿಡಿಟಿ ಪೌಡರ್ ಸಿಂಪಡಿಸಿಯೇ ಇಲ್ಲ ಎಂದು ಅಕ್ಷೇಪಣೆ ವ್ಯಕ್ತಪಡಿಸಿದರು.
ಡಿಡಿಟಿ ಪೌಡರ್ ಸಪ್ಲೇ ಮಾಡಿರುವವರು ಯಾರು ಎಂದು ಗುತ್ತಿಗೆದಾರನ ಹೆಸರು ಬಹಿರಂಗಪಡಿಸಿ ಎಂದು 7ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯ ಜಯಪಾಲ್ ಪ್ರತಿಭಟನೆಗೆ ಮುಂದಾದಾಗ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ಕುಳಿತು ಉತ್ತರಿಸಲು ತಡಬಡಿಸಿದ್ದು, ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಹುಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವ ಮುನ್ನ ಸದಸ್ಯರ ಗಮನಕ್ಕೆ ತರದೇ ಅಧಿಕಾರಿಗಳು ಅಂಗಡಿ ಕೆಡುವುದಕ್ಕೆ ಮುಂದಾಗಿದ್ದಾರೆ. ನಗರಸಭೆ ಅಧಿಕಾರದಲ್ಲಿದ್ದರೂ, ಸದಸ್ಯರ ಹಕ್ಕನ್ನು ಕಸಿದುಕೊಂಡಿರುವುದು ಸರಿಯಲ್ಲ. ತುರ್ತು ಸಭೆ ನಡೆಸಿ ಸಭೆಯಲ್ಲಿ ತೀಮಾರ್ನಿಸಿದ ನಂತರ ಅಂಡಿಗಳ ತೆರವು ಕಾರ್ಯಾಚರಣೆ ಮಾಡಬೇಕಿತ್ತು ಎಂದು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ನಂತರ ನಗರದ ಅಭಿವೃದ್ಧಿ ದೃಷ್ಟಿಯಿಂದ ಡಿಪಿಆರ್ ಮಾಡಲು ಒಪ್ಪಿಗೆ ನೀಡಲಾಯಿತು.
ವಿವಿಧ ಅಭಿವೃದ್ಧಿಗೆ ಅನುಮೋದನೆ
15ನೇ ಹಣಕಾಸು ಯೋಜನೆ ಹಾಗೂ ಇತರೆ ಯೋಜನಯಡಿ ಟೆಂಡರ್ ಕರೆದಿದ್ದು, ಬಿಡ್ ಅಂತಿಮವಾಗಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ನಗರಸಭೆ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವಾಗಿ ರೂಪಿಸಲು ಡೆಲ್ಟಾ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಲು ಅನುಮತಿ ಪಡೆಯಲಾಯಿತು. ನಗರಸಭೆ ಮುಂಬಾಗದಲ್ಲಿರುವ ಮಹಿಳಾ ಸಮಾಜ ಕಟ್ಟಡವನ್ನು ನಗರಸಭೆಗೆ ವಾಪಸ್ಸು ಪಡೆಯಲು ಒಮ್ಮತದ ನಿರ್ಧಾರ ವ್ಯಕ್ತವಾಯಿತು. ನಗರದ ಸೂರಜ್ಮಲ್ ವೃತ್ತ, ಗೀತಾ ರಸ್ತೆ, ಪ್ರಿಚರ್ಡ್ ರಸ್ತೆಯ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಲು ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು. ಅಮೃತ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಿಲ್ ಪಾವತಿಸಲು ಸಭೆಯ ಅನುಮೋದನೆ ಪಡೆಯಲಾಯಿತು.