ಈಡೇರುವುದೇ ಹಲವು ದಿನಗಳ ಬೇಡಿಕೆ?

15 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ ಗ್ರಾಮೀಣ ಜನರ ಅಭಿವೃದ್ಧಿಗೆ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಆ ಯೋಜನೆಗಳ ಲಾಭ ಪಡೆಯಲು ಬ್ಯಾಂಕ್​ ವ್ಯವಸ್ಥೆಯೇ ಇಲ್ಲದ ಕಾರಣ ಗ್ರಾಮಸ್ಥರು ಮತ್ತೊಂದು ಗ್ರಾಮ ನೆಚ್ಚಿಕೊಳ್ಳುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್​ ಸೌಲಭ್ಯ ಅತ್ಯಂತ ಅಗತ್ಯವಾಗಿದೆ. ಆದರೆ ತಾಲೂಕಿನ ರಾಮಾಪುರ ಗ್ರಾಮದಲ್ಲಿ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸುಮಾರು ದಿನಗಳಿಂದ ಬ್ಯಾಂಕ್​ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಧಾರವಾಡದಿಂದ 18 ಕಿ.ಮೀ ದೂರದಲ್ಲಿರುವ ರಾಮಾಪುರ ಗ್ರಾಮಸ್ಥರು ಬ್ಯಾಂಕ್​ ವಹಿವಾಟಿಗೆ ಮುಗದ, ಕೋಟೂರ, ತೇಗೂರ ಇಲ್ಲವೇ ಧಾರವಾಡ ನೆಚ್ಚಿಕೊಳ್ಳುವಂತಾಗಿದೆ. ಸಾಮಾಜಿಕ ಭದ್ರತಾ ಯೋಜನೆ ಅಡಿ ಅಂಗವಿಕಲರು, ವೃದ್ಧಾಪ್ಯ, ವಿಧವಾ ವೇತನ, ಸೇರಿ ವಿವಿಧ ಪಿಂಚಣಿಗಳು, ಗೃಹ ಲಕ್ಷ್ಮೀ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಈ ಪಿಂಚಣಿ ಹಣಕ್ಕಾಗಿ ಗ್ರಾಮಸ್ಥರು 8-15 ಕಿ.ಮೀ ಪ್ರಯಾಣ ಮಾಡಬೇಕು. ರಾಮಾಪುರದಿಂದ ಸುಮಾರು 15 ಕಿ.ಮೀ ದೂರದ ಕೋಟೂರ, 12 ಕಿ.ಮೀ ದೂರದ ಮುಗದ, 8 ಕಿ.ಮೀ ದೂರದ ತೇಗೂರ ಇಲ್ಲವೇ ಧಾರವಾಡಕ್ಕೆ ಆಗಮಿಸಬೇಕು. ರಾಮಾಪುರ ಗ್ರಾಪಂ ವ್ಯಾಪ್ತಿಯಲ್ಲಿನ ವೀರಾಪುರ, ಕಲ್ಲಾಪುರ, ಹೊಸವಾಳ, ಸಿದ್ದಾಪುರ ಸೇರಿ ಸುತ್ತಲಿನ ಎಲ್ಲ ಗ್ರಾಮಗಳ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷಿ ಸಾಲ, ಯಂತ್ರೋಪಕರಣ ಸಾಲ ಸೇರಿ ಪ್ರತಿಯೊಂದಕ್ಕೂ ಬ್ಯಾಂಕ್​ ಅವಲಂಬಿಸಬೇಕಿದೆ. ಹೀಗಾಗಿ ಬ್ಯಾಂಕ್​ ಸ್ಥಾಪನೆಗೆ ಅದರಲ್ಲೂ ಸರ್ಕಾರಿ ಸ್ವಾಮಿತ್ವದ (ಕೆವಿಜಿ, ಬ್ಯಾಂಕ್​ ಆಫ್ ಬರೋಡಾ, ಎಸ್​ಬಿಐ, ಇತರೆ) ಬ್ಯಾಂಕ್​ಗಳ ಸ್ಥಾಪನೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ಲೀಡ್​ ಬ್ಯಾಂಕ್​ ಅಧಿಕಾರಿಗಳು ಮಾತ್ರ ಹಲವು ಕಾರಣ ಹೇಳಿ ಮುಂದೂಡುತ್ತಿದ್ದಾರೆ. ಕಳೆದ ತಿಂಗಳಷ್ಟೇ ಗ್ರಾಮಸ್ಥರು ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಲ್ಲದೆ, ಲೀಡ್​ ಬ್ಯಾಂಕ್​ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆಯೂ ಒತ್ತಾಯಿಸಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಬ್ಯಾಂಕ್​ ಸ್ಥಾಪನೆಗೆ ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.

ಗ್ರಾಮದಲ್ಲಿ ಬ್ಯಾಂಕ್​ ಸ್ಥಾಪನೆ ಮಾಡಿದರೆ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ವಿಚಾರವಾಗಿ ಕೆವಿಜಿ ಬ್ಯಾಂಕ್​ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಖಾಸಗಿ ಬದಲು ಸರ್ಕಾರಿ ಬ್ಯಾಂಕ್​ಗಳನ್ನು ಸ್ಥಾಪಿಸಬೇಕು ಎಂಬುದು ನಮ್ಮ ಬೇಡಿಕೆ. ಜಿಲ್ಲಾಧಿಕಾರಿ ನಮ್ಮ ಮನವಿಗೆ ಸ್ಪಂದಿಸಿದರೆ ಅನುಕೂಲವಾಗಲಿದೆ. * ಶಾಂತವೀರಯ್ಯ ಹಿರೇಮಠ, ರಾಮಾಪುರ ಗ್ರಾಮಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net