ಜಾತಿ ದೃಢೀಕರಣ ಪತ್ರಕ್ಕೆ ಆದಾಯ ಅವಶ್ಯಕವೇ?

BIRUR csa
ಬೀರೂರು ನಿವಾಸಿ ಜಾತಿ ದೃಢೀಕರಣ ಪತ್ರ ಕೋರಿ ಸಲ್ಲಿಸಿದ ಅರ್ಜಿಯನ್ನು ತಾಲ್ಲಕು ಆಡಳಿತ ಆದಾಯ ಹೆಚ್ಚಳದ ಕಾರಣ ನೀಡಿ ತಿರಸ್ಕರಿಸಿರುವುದು.
Published on

ಬೀರೂರು: ಜಾತಿ ದೃಢೀಕರಣ ಪತ್ರಕ್ಕೆ ನೀಡಿದ ಅರ್ಜಿಗೆ ಆದಾಯ ಹೆಚ್ಚಿದೆ ಎನ್ನುವ ಕಾರಣ ನೀಡಿ ಜಾತಿ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆ ತಿರಸ್ಕರಿಸಿದೆ. ಇದರಿಂದಾಗಿ ಜಾತಿ ದೃಢೀಕರಣ ಪತ್ರಕ್ಕೂ ಆದಾಯ ಅವಶ್ಯಕವೇ? ಎಂಬ ಪ್ರಶ್ನೆ ಮೂಡಿದೆ.

ಪಟ್ಟಣದ ಪರಿಶಿಷ್ಟ ಜಾತಿಯ ಗೃಹಿಣಿಯೊಬ್ಬರು ಜಾತಿ ದೃಢೀಕರಣ ಪತ್ರ ಕೋರಿ ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರ ನಿಗದಿಪಡಿಸಿದ 21 ಕೆಲಸದ ಅವಧಿ ಮುಗಿದ ಬಳಿಕ ದೃಢೀಕರಣ ಪತ್ರ ಲಭ್ಯವಿದ್ದರೆ ಪಡೆಯಲುಸೇವಾ ಕೇಂದ್ರಕ್ಕೆ ತೆರಳಿ ಪರಿಶೀಲಿಸಿದಾಗ ಅರ್ಜಿ ತಿರಸ್ಕೃತಗೊಂಡಿರುವುದು ಕಂಡುಬಂದಿದೆ. ಜಾತಿ ದೃಢೀಕರಣ ಪತ್ರ ತಿರಸ್ಕೃತಗೊಳ್ಳಲು ಕಾರಣವೇನು ಎಂದು ನೋಡಿದರೆ, ಹಿಂಬರಹದಲ್ಲಿ ಅರ್ಜಿದಾರನ ಆದಾಯ ಮಿತಿಗಿಂತ ಹೆಚ್ಚಿರುವುದರಿಂದ ಜಾತಿ ಪ್ರಮಾಣಪತ್ರ ನೀಡಲಾಗುವುದಿಲ್ಲ ಎಂದು ನಮೂದಿಸಲಾಗಿತ್ತು. ಇದನ್ನು ಕಂಡು ಅಚ್ಚರಿಗೊಂಡ ಅರ್ಜಿದಾರರು ಜಾತಿ ಪ್ರಮಾಣ ಪತ್ರಕ್ಕೂ ಆದಾಯ ಮಿತಿಗೂ ಏನು ಸಂಬಂಧ ಎಂದು ತಲೆಕೆಡಿಸಿಕೊಂಡಿದ್ದಾರೆ. ಗ್ರಾಮ ಒನ್ ಅಥವಾ ನಾಗರಿಕ ಸೇವಾ ಕೇಂದ್ರಗಳಿಂದ ಸಲ್ಲಿಸಲಾಗುತ್ತಿರುವ ಬಹಳಷ್ಟು ಅರ್ಜಿಗಳನ್ನು ನಾಡ ಕಚೇರಿಯಲ್ಲಿ ಅಥವಾ ತಾಲೂಕು ಕಚೇರಿಯಲ್ಲಿ ಸರಿಯಾಗಿ ಪರಿಶೀಲಿಸದೆ ಬಹಳಷ್ಟು ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗುತ್ತಿದೆ. ಈ ಕುರಿತು ತಹಸೀಲ್ದಾರ್ ಸೂಕ್ತ ಕ್ರಮಕೈಗೊಂಡು ಅರ್ಹ ಅರ್ಜಿದಾರರಿಗೆ ದಾಖಲೆಪತ್ರ ವಿತರಿಸಬೇಕು. ಈ ಕುರಿತು ಕಡೂರು ತಹಸೀಲ್ದಾರ್ ಎಂ.ಪಿ.ಕವಿರಾಜ್ ಪ್ರತಿಕ್ರಿಯಿಸಿದ್ದು, ಅರ್ಜಿದಾರರು ಜಾತಿ ಪ್ರಮಾಣಪತ್ರಕ್ಕೆ ಕೋರಿಕೆ ಸಲ್ಲಿಸುವಾಗ ತಂದೆಯ ಜಾತಿ ಪ್ರಮಾಣಪತ್ರ ಲಗತ್ತಿಸಿರಲಿಲ್ಲ. ಡಾಟಾ ಆಪರೇಟರ್ ಕಾರಣ ನಮೂದಿಸುವ ಸಂದರ್ಭದಲ್ಲಿ ಇರುವ ಆಯ್ಕೆಗಳಲ್ಲಿ ತಪ್ಪು ಆಯ್ಕೆ ನಮೂದಿಸಿರುವ ಕಾರಣ ಹೀಗಾಗಿದೆ. ಅಟಲ್ ಜನಸ್ನೇಹಿ ಕೇಂದ್ರದ ವೆಬ್ ನಿರ್ವಾಹಕರಿಗೆ ನಿಗದಿತ ಕಾರಣ ನಮೂದಿಸಲು ಅವಕಾಶವಾಗುವಂತೆ ವಯಬ್‌ಸೈಟ್‌ನಲ್ಲಿ ಬದಲಾವಣೆ ಮಾಡಲು ಕೋರಲಾಗುವುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net