ಈಶ್ವರಪ್ಪಗೆ ಯಾವುದೇ ಬೆಲೆ ಇಲ್ಲ, ಅವರೇನು ರಾಜ್ಯಾಧ್ಯಕ್ಷರಾ?: ಎಸ್.ಟಿ. ಸೋಮಶೇಖರ್ ಆಕ್ರೋಶ

s.t.somashekhar
Published on

ಮೈಸೂರು: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಯಾವುದೇ ಬೆಲೆ ಇಲ್ಲ, ಬೆಲೆ ಇಲ್ಲದವರ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳು ವುದಿಲ್ಲ ಎಂದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಪಕ್ಷದಿಂದ ಬಿಟ್ಟುಹೋಗು ಅಂತ ಹೇಳಲು ಈಶ್ವರಪ್ಪ ಯಾರು? ಈಶ್ವರಪ್ಪ ಏನು ರಾಜ್ಯಾಧ್ಯಕ್ಷನಾ? ಈಶ್ವರಪ್ಪನ ನಂಬಿ ನಾನು ಪಕ್ಷಕ್ಕೆ ಬರಲಿಲ್ಲ, ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ಈ ಎಲ್ಲ ಬೆಳವಣಿಗೆಯಾದ ನಂತರ ನಾನು ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದೇನೆ. ಅವರು ಯಾವುದೇ ಕಾರಣಕ್ಕೆ ಪಕ್ಷ ಬಿಡಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲಿದ್ದೇನೆ ಎಂದು ಹೇಳಿದರು.

ಬಿಜೆಪಿಯವರು ಪಕ್ಷಕ್ಕೆ ಬರುವಾಗ ಜಾಮೂನು ಕೊಡುತ್ತಾರೆ, ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ. ನಾನು ಕಾಂಗ್ರೆಸ್ ನಲ್ಲಿದ್ದವನು. ಅವರಾಗೇ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್.ಟಿ.ಸೋಮಶೇಖರ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ. ನನ್ನನ್ನು ಪಕ್ಷ ಬಿಡಿಸಲು ರೆಡಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇವಲ ನನ್ನ ಬೆಂಬಲಿಗರು ಮಾತ್ರ ಪಕ್ಷ ಬಿಟ್ಟಿಲ್ಲ, ಮಾಜಿ ಸಚಿವರಾದ ಆರ್. ಅಶೋಕ್, ಮುನಿರತ್ನ ಕ್ಷೇತ್ರದ ಬಿಜೆಪಿ ನಾಯಕರು ಪಕ್ಷ ತೊರೆದಿಲ್ಲವೇ? ನನ್ನನ್ನು ಮಾತ್ರ ಏತಕ್ಕೆ ಟಾರ್ಗೆಟ್ ಮಾಡುತ್ತಿದ್ದೀರಾ? ಕ್ಷೇತ್ರದಲ್ಲಿ ಸಾವಿರ ಜನ ಲೀಡರ್ ಇರುತ್ತಾರೆ. ಚುನಾವಣೆ ಸಂದರ್ಭ ಆ ಕಡೆ ಈ ಕಡೆ ಹೋಗುತ್ತಾರೆ, ಇದಕ್ಕೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದರು.

ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ, ನಾನು ಮಾನಸಿಕವಾಗಿ ದೈಹಿಕವಾಗಿ ಬಿಜೆಪಿಯಲ್ಲಿದ್ದೇನೆ. ಕಾಂಗ್ರೆಸ್ ಸೇರುತ್ತೇನೆ ಎಂಬುದೆಲ್ಲ ಊಹಾಪೋಹಗಳು. ನಾನು ಯಡಿಯೂರಪ್ಪ ಅವರ ಮಾತು ನಂಬಿ ಬಿಜೆಪಿಯಲ್ಲಿದ್ದೇನೆ. ಆದರೆ ಕೆಲವರು ಪಕ್ಷದಿಂದ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಗ್ಗೆ ದಾಖಲೆ ಸಮೇತ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಆದರೆ, ಅವರ ಹುಟ್ಟಹಬ್ಬವನ್ನೇ ಕ್ಷೇತ್ರದಲ್ಲಿ ಅದ್ದೂರಿಯಾಗಿ ಮಾಡಿದರು, ಇದೆಲ್ಲ ಏನ್ ಅರ್ಥ ಬಸವರಾಜು ಬೊಮ್ಮಯಿ ಮುಖ್ಯಮಂತ್ರಿಯಾದಾಗಲೂ ನನ್ನನ್ನು ಯಡಿಯೂರಪ್ಪ ಉಳಿಸಿಕೊಂಡರು. ಯಡಿಯೂರಪ್ಪನವರ ವಿರುದ್ಧ ಐದಾರು ಜನರು ಮಾತನಾಡಿದರು. ಅವರ ವಿರುದ್ಧ ಪಕ್ಷದಲ್ಲಿ ಕ್ರಮ ತೆಗೆದುಕೊಳ್ಳಲಿಲ್ಲ, ಇದು ಪಕ್ಷದ ಹಿನ್ನೆಡೆಗೆ ಕಾರಣವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net