ಡಂಬಳದಲ್ಲಿರುವುದು ಬಸ್ ನಿಲ್ದಾಣವೋ ದನದ ಕೊಟ್ಟಿಗೆಯೋ?

DML STORY 1
Published on

ಶಿವಕುಮಾರ ಬ್ಯಾಳಿ ಡಂಬಳ
ಹೆಸರಿಗಷ್ಟೇ ಸರ್ಕಾರಿ ಬಸ್ ನಿಲ್ದಾಣ. ಆದರೆ, ಈಗಿರೋದು ದನ-ಕರುಗಳ ಆಶ್ರಯ ತಾಣ. ಖಾಸಗಿ ವಾಹನಗಳ ತಂಗುದಾಣ…
ಇದು ಮುಂಡರಗಿ ತಾಲೂಕಿನಲ್ಲೇ ಅತಿದೊಡ್ಡ ಹೋಬಳಿ ಎನ್ನುವ ಖ್ಯಾತಿ ಪಡೆದ, ಹೆಚ್ಚು ಜನದಟ್ಟಣೆ ಇರುವ ಡಂಬಳ ಗ್ರಾಮದ ವಾಸ್ತವ ಸ್ಥಿತಿ.
ಗ್ರಾಮದಲ್ಲಿರುವ ವಿಶಾಲವಾದ ಬಸ್ ನಿಲ್ದಾಣದ ಒಳಗೆ ಸಾರಿಗೆ ಸಂಸ್ಥೆಯ ಬಸ್‌ಗಳೇ ಬರುವುದಿಲ್ಲ. ಹೀಗಾಗಿ ಈ ಸ್ಥಳ ಖಾಸಗಿಯವರ ಪಾಲಿಗೆ ವರದಾನವಾಗಿದೆ. ದನಕರು ಕಟ್ಟುವ ಕೊಟ್ಟಿಗೆಯಾಗಿದೆ. ಡಂಬಳ 28 ಗ್ರಾಮಗಳನ್ನೊಳಗೊಂಡ ದೊಡ್ಡ ಹೋಬಳಿಯಾಗಿದ್ದರಿಂದ ನಾಡ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ಆಸ್ಪತ್ರೆ, ಹೆಸ್ಕಾಂ ಶಾಖಾ ಕಚೇರಿ, ಅಂಚೆ ಕಚೇರಿ, ಸಣ್ಣ ನೀರಾವರಿ ಇಲಾಖೆ, ರೈತ ಸಂಪರ್ಕ ಕೇಂದ್ರ ಸೇರಿದಂತೆ ಹಲವಾರು ಕಚೇರಿಗಳು ಇಲ್ಲಿವೆ. ಜತೆಗೆ ತೋಂಟದಾರ್ಯ ಮಠ, ದೊಡ್ಡ ಬಸವೇಶ್ವರ ದೇವಸ್ಥಾನ, ಜಪದ ಬಾವಿ, ಐತಿಹಾಸಿಕ ಕೆರೆ, ಜಮಾಲಶಾವಲಿ ದರ್ಗಾ ಸೇರಿದಂತೆ ಹಲವು ಐತಿಹಾಸಿಕ ತಾಣಗಳು ಇರುವುದರಿಂದ ನಿತ್ಯವೂ ನೂರಾರು ಜನರು ಬರುತ್ತಾರೆ. ಹೀಗೆ ಬಂದವರು ಮಳೆ-ಗಾಳಿ ಲೆಕ್ಕಿಸದೆ ರಸ್ತೆ ಬದಿಯಲ್ಲೇ ನಿಂತು ಬಸ್ಸಿಗಾಗಿ ಕಾಯುವ ಪರಿಸ್ಥಿತಿ ಬಂದಿದೆ. ಬಸ್ ನಿಲ್ದಾಣ ಶುಚಿಗೊಳಿಸಿ ಒಳಗೆ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕು ಎನ್ನುವ ಒತ್ತಾಯ ಸ್ಥಳೀಯರಿಂದ ಕೇಳಿ ಬಂದಿದೆ.
ಬೈಪಾಸ್ ಸಂಚಾರ: ಇದ್ದೂ ಇಲ್ಲದಂತಾಗಿರುವ ಡಂಬಳ ಬಸ್ ನಿಲ್ದಾಣದಲ್ಲಿ ಕಂಟ್ರೋಲರ್ ಕಂಡಿದ್ದು ಸಿಎಂ ಭೇಟಿ, ಡಿಸಿ ಗ್ರಾಮ ವಾಸ್ತವ್ಯ ಹೀಗೆ ಪ್ರಮುಖ ಅಧಿಕಾರಿಗಳ ಪರಿಶೀಲನೆ ಸಂದರ್ಭದಲ್ಲಿ ಮಾತ್ರ. ಕಂಟ್ರೋಲರ್ ಇಲ್ಲದ ಕಾರಣ ಕೆಲವು ಬಸ್ ಚಾಲಕರು ಬೈಪಾಸ್‌ನಿಂದಲೇ ಮುಂದೆ ಹೋಗುತ್ತಾರೆಯೇ ಹೊರತು ಊರೊಳಗೆ ಬರುವುದೇ ಇಲ್ಲ. ಹೀಗಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರು, ನೌಕರರು ಸೇರಿದಂತೆ ಹಲವಾರು ಪ್ರಯಾಣಿಕರು ತೊಂದರೆಪಡುವಂತಾಗಿದೆ.
ತಡೆರಹಿತ ಬಸ್: ಮುಂಡರಗಿಯಿಂದ ಗದಗಕ್ಕೆ ನಿತ್ಯ ಹಲವಾರು ಬಸ್‌ಗಳು ಸಂಚರಿಸುತ್ತವೆ. ಆದರೆ, ಸಿಬ್ಬಂದಿ ಕೊರತೆ ನೆಪದಲ್ಲಿ ಬಸ್‌ಗಳನ್ನು ತಡೆರಹಿತವಾಗಿ ಓಡಿಸಿ ಡಂಬಳ ಹಾಗೂ ಸಮೀಪದ ಬರದೂರ, ಮೇವುಂಡಿ, ಹೊಸ ಕದಾಂಪೂರ, ಪಾಪನಾಶಿ ಗ್ರಾಮದ ಪ್ರಯಾಣಿಕರನ್ನು ಪರದಾಡುವಂತೆ ಮಾಡಲಾಗುತ್ತಿದೆ.
ಹಣ್ಣು ಮಾರಾಟಕ್ಕೂ ಕುತ್ತು: ಗದಗ ಮುಂಡರಗಿ ಮಾರ್ಗದಲ್ಲಿ ಸಂಚರಿಸುವ ಬಸ್ ಡಂಬಳ ಗ್ರಾಮಕ್ಕೆ ಬಂದಾಗ ಸ್ಥಳೀಯ ವ್ಯಾಪಾರಸ್ಥರು ಪೇರಲು, ಬಾರಿಹಣ್ಣು, ನೇರಳೆ, ನೆಲ್ಲಿ ಸೇರಿದಂತೆ ಹಲವು ರುಚಿಕರವಾದ ಹಣ್ಣುಗಳನ್ನು ಬಸ್‌ನ ಕಿಟಕಿಗಳ ಮೂಲಕ ಮಾರಾಟ ಮಾಡಿ ಹತ್ತಾರು ರೂಪಾಯಿ ಸಂಪಾದಿಸುತ್ತಿದ್ದರು. ಆದರೆ, ಬಸ್‌ಗಳು ನಿಲ್ದಾಣಕ್ಕೆ ಬಾರದೆ ಇರುವುದರಿಂದ ಹಣ್ಣುಗಳ ಮಾರಾಟಗಾರರಿಗೂ ಕುತ್ತು ತಂದಿದೆ.

ಬಸ್ ನಿಲ್ದಾಣದ ಒಳಗೆ ಬಸ್ ಬರುತ್ತಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಪರಿಶೀಲಿಸಲಾಗುತ್ತದೆ. ಸಿಬ್ಬಂದಿ ಕೊರತೆ ಇರುವುದರಿಂದ ಡಂಬಳ, ಹಿರೇವಡ್ಡಟ್ಟಿ ಬಸ್ ನಿಲ್ದಾಣದಲ್ಲಿ ಕಂಟ್ರೋಲರ್ ಇಲ್ಲ. ಇರುವ ಸಿಬ್ಬಂದಿ ಮೂಲಕ ವಾರಕ್ಕೊಮ್ಮೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಅವ್ಯವಸ್ಥೆಯನ್ನು ಸರಿಪಡಿಸಲಾಗುತ್ತದೆ.-ಶೇಖರ ನಾಯಕ, ಡಿಪೋ ಮ್ಯಾನೇಜರ್ ಮುಂಡರಗಿ

ಬಸ್ ನಿಲ್ದಾಣದ ಒಳಗೆ ಬಸ್ ಬರುವಂತೆ ವ್ಯವಸ್ಥೆ ಮಾಡಬೇಕು. ಕಂಟ್ರೋಲರನ್ನು ನೇಮಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ, ರಾತ್ರಿ ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು. ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು.-ಈರಣ್ಣ ನಂಜಪ್ಪನವರ ಡಂಬಳ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net