2ನೇ ಹಂತದ ಗ್ರಾಮ ಸಂಗ್ರಾಮದಲ್ಲಿ ಮತ ಚಲಾಯಿಸುವ ಕರೊನಾ ಸೋಂಕಿತರೆಷ್ಟು ? ಜಿಲ್ಲಾಡಳಿತ ಮಾಡಿಕೊಂಡ ಕಂಪ್ಲೀಟ್ ಸಿದ್ಧತೆ ಇಲ್ಲಿದೆ!

24HSN4
Published on

ಹಾಸನ: ಡಿ. 27 ರಂದು ನಾಲ್ಕು ತಾಲೂಕಿನ 120 ಗ್ರಾಮ ಪಂಚಾಯಿತಿಗೆ ಎರಡನೇ ಹಂತದ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಅರಸೀಕೆರೆ, ಆಲೂರು, ಬೇಲೂರು ಹಾಗೂ ಹೊಳೆನರಸೀಪುರ ತಾಲೂಕಿನ 120 ಗ್ರಾಪಂಗೆ 1648 ಸ್ಥಾನಗಳಿಗೆ ಮತದಾನ ನಡೆಯಲಿದ್ದು, 4041 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 905 ಮತಗಟ್ಟೆ ತೆರೆಯಲಾಗಿದೆ. 178 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 76 ಕರೊನಾ ಸೋಂಕಿತರು ಮತದನಾಕ್ಕೆ ಬರಲು ಒಪ್ಪಿದ್ದಾರೆ. ಅವರಿಗಾಗಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಅರಸೀಕೆರೆ ತಾಲ್ಲೂಕಿನ 43 ಗ್ರಾಮ ಪಂಚಾಯಿತಿಗಳಲ್ಲಿ 338 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 1,91,586 ಜನ ಮತದಾರರಿದ್ದಾರೆ. ಬೇಲೂರು ತಾಲೂಕಿನ 37 ಗ್ರಾಮ ಪಂಚಾಯಿತಿಗಳಲ್ಲಿ 230 ಮತಗಟ್ಟೆಗಳನ್ನು ಸ್ಥಾಪಿಸಿದ್ದು 1,29,208 ಮತದಾರರಿದ್ದಾರೆ. ಆಲೂರು 14 ಗ್ರಾಪಂನಿಂದ 118 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 54,047 ಮತದಾರರು, ಹೊಳೆನರಸೀಪುರ ತಾಲೂಕಿನ 26 ಪಂಚಾಯಿತಿಗಳಿಂದ 219 ಮತಗಟ್ಟೆ ಸ್ಥಾಪಿಸಿದ್ದು, 1,17,695 ಮತದಾರರು ಮತದಾನದ ಅರ್ಹತೆ ಪಡೆದಿದ್ದಾರೆ ಎಂದರು.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ- ಬಾಗೂರು ರಸ್ತೆಯಲ್ಲಿ ಕುಕ್ಕರ್ ಹಂಚಿಕೆಗೆ ತೆರಳುತ್ತಿದ್ದ ವಾಹನ ಸೀಜ್ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೆ ಕೋಳಿ ಮಾಂಸ ಹಂಚುತ್ತಿದ್ದವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಕಲೇಶಪುರದ ನಾಲ್ಕು ಗ್ರಾಪಂನಲ್ಲಿ ಚುನಾವಣೆ ಬಹಿಷ್ಕರಿಸಿದ್ದು ಮುಂದಿನ ದಿನಗಳಲ್ಲಿ ಸರ್ಕಾರದ ನಿರ್ದೇಶನದಂತೆ ಅಲ್ಲಿಯೂ ಮತದಾನ ನಡೆಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net