

ನಾಪೋಕ್ಲು: ವಿದ್ಯಾರ್ಥಿಗಳು ತಮ್ಮ ಚಂಚಲ ಮನಸ್ಸನ್ನು ಹತೋಟಿಗೆ ತಂದುಕೊಳ್ಳುವುದು ಅನಿವಾರ್ಯ ಎಂದು ಬೆಟ್ಟಗೇರಿ ಉದಯ ಪ್ರೌಢ ಶಾಲೆ ಎಸ್‌ಡಿಸಿಎಂಸಿ ಅಧ್ಯಕ್ಷ ಹಾಗೂ ಕಾಫಿ ಮಂಡಳಿ ನಿರ್ದೇಶಕ ತಳೂರು ಕಿಶೋರ್ ಕುಮಾರ್ ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ , ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಬೆಟ್ಟಗೇರಿ ವಲಯ ಮತ್ತು ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಹಯೋಗದಲ್ಲಿ ಸಮೀಪದ ಬೆಟ್ಟಗೇರಿ ಉದಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳೇ ಉತ್ತಮ ಸಮಾಜದ ಆಸ್ತಿ. ಇಂತಹ ವಿಶೇಷವಾದ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ನಡೆಸಿದ ಧರ್ಮಸ್ಥಳ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಸದಸ್ಯ ಬೆಳ್ಯನ ಚಂದ್ರ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮಹನೀಯರನ್ನು ಮಾದರಿ ಮಾಡಿಕೊಂಡು ಶ್ರದ್ಧೆಯಿಂದ ಕಲಿತರೆ ಜವಾಬ್ದಾರಿಯುತ ಸ್ಥಾನ ಹಾಗೂ ಹುದ್ದೆ ಪಡೆಯಬಹುದು ಎಂದರು.
ನಮ್ಮ ಪರಿಸರ ಹಾಗೂ ನಮ್ಮಲ್ಲಿ ಸ್ವಾಸ್ಥ್ಯ ಸಂಕಲ್ಪಕ್ಕೆ ಸ್ವಚ್ಛತೆ ಪ್ರಮುಖ ಅಸ್ತ್ರವಾಗಿದೆ. ಶಿಸ್ತು ಸಂಯಮ ಹಾಗೂ ದುಶ್ಚಟ ರಹಿತವಾಗಿ ಏಕಾಗ್ರತೆಯಿಂದ ನಡೆಸುವ ಜೀವನ ಸಮೃದ್ಧ ಆರೋಗ್ಯಕ್ಕೆ ಪೂರಕವಾಗಿದೆ ಎಂದರು.
ಬೆಳ್ತಂಗಡಿಯ ಕರ್ನಾಟಕ ಜನಜಾಗೃತಿ ವೇದಿಕ ಟ್ರಸ್ಟ್‌ನ ಶಿಬಿರಾಧಿಕಾರಿ ಪಿ.ಪಿ.ನಂದಕುಮಾರ್ ಮಾತನಾಡಿ, ಇದುವರೆಗೆ ರಾಜ್ಯದ 20,675 ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು 17,51,947 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದಿದ್ದಾರೆ. ಜನಜಾಗೃತಿ ವೇದಿಕೆ ಮೂಲಕ ಸಮುದಾಯದ ಸಹಭಾಗಿತ್ವದೊಂದಿಗೆ ಇದುವರೆಗೆ 1960 ಮದ್ಯವರ್ಜನ ಶಿಬಿರಗಳನ್ನು ನಡೆಸಿ 1 ಲಕ್ಷದ 50 ಸಾವಿರಕ್ಕೂ ಹೆಚ್ಚು ಮದ್ಯ ವ್ಯಸನಿಗಳನ್ನು ವ್ಯಸನದಿಂದ ಹೊರಬರುವಂತೆ ಮಾಡಲಾಗಿದೆ ಎಂದರು.
ವಿದ್ಯಾರ್ಥಿ ಜೀವನ ಹಸಿ ಮಣ್ಣಿನ ಮಡಕೆಯಿದ್ದಂತೆ. ಹೆಚ್ಚು ಸಡಿಲವಾದರೂ, ಹೆಚ್ಚು ಬಿಗಿ ಮಾಡಿದರೂ ಒಡೆಯುವುದು ಮಡಕೆಯೇ. ಹದಿಹರೆಯದಲ್ಲಿನ ಒತ್ತಡಗಳು, ಪಾಲಕರ, ಸ್ನೇಹಿತರ ಒತ್ತಡ, ಜೀವನ ಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ್ಯ, ಪ್ರೀತಿಯ ಕೊರತೆ, ಅನಾರೋಗ್ಯ, ಪಾಶ್ಚಾತ್ಯ ಸಂಸ್ಕೃತಿ, ಸಾಹಸ ಪ್ರವೃತ್ತಿ, ನಕಾರಾತ್ಮಕ ಚಿಂತನೆಗಳು ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳು ಮಾದಕ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆಗಳಿರುತ್ತವೆ. ಸಮಾಜದಲ್ಲಿ ವ್ಯಸನಕ್ಕೆ ಬಲಿಯಾದವರು ಅಪಘಾತ, ಆತ್ಮಹತ್ಯೆ ಮತ್ತು ಅಕಾಲಿಕ ಮರಣಗಳಿಗೆ ತುತ್ತಾಗುವುದು ಸಾಮಾನ್ಯ ಎಂದು ಎಚ್ಚರಿಸಿದರು.
ಅತಿಯಾದ ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣ ದಿಂದಲೂ ವಿದ್ಯಾರ್ಥಿಗಳ ಮನಸ್ಥಿತಿ ಹಾಳಾಗುತ್ತದೆ. ದೃಢ ನಿರ್ಧಾರ, ಸಂವಹನ ಕೌಶಲ, ರಚನಾತ್ಮಕ ಚಿಂತನೆ, ವಿಮರ್ಶಾತ್ಮಕ ಚಿಂತನೆಯಂತಹ ಉತ್ತಮ ಗುಣಗಳನ್ನು ಬೆಳೆಸಿಕೊಂಡರೆ ಆದರ್ಶ ವಿದ್ಯಾರ್ಥಿಯಾಗಿ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಆರೋಗ್ಯಪೂರ್ಣ ಸಮಾಜ ಅಥವಾ ದುಶ್ಚಟಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ. ಬಹುತೇಕ ಯುವಜನತೆ ಬಾಹ್ಯ ವ್ಯಕ್ತಿಗಳ ಪ್ರಭಾವದಿಂದ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದನ್ನು ತಡೆಗಟ್ಟಲು ಸಂಕಲ್ಪ ಮಾಡೋಣ ಎಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಎಸ್‌ಡಿಎಂಸಿ ಕಾರ್ಯದರ್ಶಿ ದೊರೆಮಾದಪ್ಪ, ಮುಖ್ಯಶಿಕ್ಷಕ ಹೇಮಂತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಬೆಟ್ಟಗೇರಿ ವಲಯದ ಮೇಲ್ವಿಚಾರಕಿ ವಿದ್ಯಾ, ಬೆಟ್ಟಗೇರಿ ಒಕ್ಕೂಟದ ಅಧ್ಯಕ್ಷೆಯ ಪದ್ಮಾವೇಣಿ, ಸೇವಾಪ್ರತಿನಿಧಿ ಗೌರಮ್ಮ ಇತರರು ಇದ್ದರು.