ನೀರಾವರಿ ಯೋಜನೆಗಳಿಗೆ ಅನುದಾನ ನೀಡಿ

18npn1-Web
ನಿಪ್ಪಾಣಿಯ ಪ್ರವಾಸಿ ಮಂದಿರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ವಿವಿಧ ಯೋಜನೆಗಳಿಗೆ ಅನುದಾನ ಕಲ್ಪಿಸಲು ಮನವಿ ಸಲ್ಲಿಸಿದರು. ಡಾ. ರಾಜೇಶ ನೇರ್ಲಿ ಇತರರಿದ್ದರು.
Published on

ನಿಪ್ಪಾಣಿ: ಸ್ಥಳೀಯ ಮತಕ್ಷೇತ್ರ ವ್ಯಾಪ್ತಿಯ ನಿಢೋರಿ ಮತ್ತು ಬಿದರಿ ಶಾಖಾ ಕಾಲುವೆ ಅಭಿವೃದ್ಧಿಗೊಳಿಸಲು 12 ಕೋಟಿ ರೂ., ಸಿಡಿ ಸಹಿತ ದತ್ತವಾಡ ಲಿಂಕ್, ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ನಿರ್ಮಾಣಕ್ಕೆ 43.2 ಕೋಟಿ ರೂ., ಬ್ರಿಡ್ಜ್-ಬ್ಯಾರೇಜ್ ನಿರ್ಮಾಣ ಹಾಗೂ ವೇದಗಂಗಾ-ದೂಧಗಂಗಾ ನದಿಗಳಿಂದ ತಾಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ನೀರೆತ್ತಲು 2.2 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಕೈಗೊಳ್ಳುವಂತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ ಜಾರಕಿಹೊಳಿಗೆ ಮನವಿ ಸಲ್ಲಿಸಿ ಮಾತನಾಡಿ, ಸ್ಥಳೀಯ ಮತಕ್ಷೇತ್ರ ವ್ಯಾಪ್ತಿಯ ದೂಧಗಂಗಾ ಯೋಜನೆಯಡಿ ಬರುವ ನಿಢೋರಿ ಹಾಗೂ ಬಿದರಿ ಶಾಖಾ ಕಾಲುವೆಗಳು ಸುಮಾರು 20 ವರ್ಷಗಳ ಹಿಂದೆ ನಿರ್ಮಾಣಗೊಂಡಿವೆ. ಅವು ಹಾಳಾಗಿವೆ. ರೈತರ ಹಿತದೃಷ್ಟಿಯಿಂದ ಕಾಲುವೆ ರಿಪೇರಿ ಅವಶ್ಯಕತೆಯಿದೆ. ನಿಢೋರಿ ಶಾಖಾ ಕಾಲುವೆಯ ಆಯ್ದ ಭಾಗಗಳಲ್ಲಿ ಸಿಸಿ ಲೈನಿಂಗ್ ನಿರ್ಮಾಣಕ್ಕೆ 5 ಕೋಟಿ ರೂ., ಬಿದರಿ ಶಾಖಾ ಕಾಲುವೆಯ ಆಯ್ದ ಭಾಗಗಳಲ್ಲಿ ಕಟ್ ಮತ್ತು ಕವರ್ ನಿರ್ಮಿಸಲು 5 ಕೋಟಿ ರೂ., ಮತ್ತಿತರ ಯೋಜನೆ ಅನುಷ್ಠಾನಕ್ಕೆ ಅನುದಾನ ಕಲ್ಪಿಸಬೇಕು ಎಂದು ಕೋರಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಹಾಲಶುಗರ್ಸ್ ಕಾರ್ಖಾನೆ ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ಮಲಗೊಂಡಾ ಪಾಟೀಲ, ಡಾ.ರಾಜೇಶ ನೇರ್ಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net