ನೀರು ಹರಿಸಲು ಪರಮಶಿವಯ್ಯ ಕಾರಣ : ಸಂಸದ ಜಿ.ಎಸ್.ಬಸವರಾಜು

12TMK_VV_Paramashivaiah
Published on

ತುಮಕೂರು: ರಾಜ್ಯದ ಸಮಗ್ರ ನೀರಾವರಿ ಅಧ್ಯಯನದ ಉದ್ದೇಶದಿಂದ ತುಮಕೂರು ವಿವಿ ಆರಂಭಿಸಿರುವ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದಿಂದ ‘ನೀರಾವರಿ ಯೋಜನೆಗಳ ಅನುಷ್ಠಾನ, ನಿರ್ವಹಣೆ ಮತ್ತು ಕಾರ್ಯತಂತ್ರ’ ವಿಷಯ ಕುರಿತು ತುಮಕೂರು ವಿವಿಯಲ್ಲಿ ಬುಧವಾರ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಜಿ.ಎಸ್.ಬಸವರಾಜು, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಕಿರುಕುಳ ಮೆಟ್ಟಿನಿಂತು ಜಿ.ಎಸ್. ಪರಮಶಿವಯ್ಯ ಶಾಶ್ವತ ಕೆಲಸ ಮಾಡಿದರು. ಬಯಲು ಸೀಮೆಯ ಬರ ನೀಗಿಸುವ ಅವರ ಪ್ರಯತ್ನ ಶಾಶ್ವತವಾಗಿದೆ ಎಂದು ತಿಳಿಸಿದರು. ಹೇಮಾವತಿ ತುಮಕೂರಿಗೆ ಹರಿದಿದ್ದರೆ ಅದಕ್ಕೆ ಪರಮಶಿವಯ್ಯ ಕಾರಣ, ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ದೇವೇಗೌಡರ ವಿರೋಧ ಕಟ್ಟಿಕೊಂಡ ಹೋರಾಟ ಮಾಡಿದ್ದರು. ಮಾಜಿ ಶಾಸಕ ಹುಚ್ಚಮಾಸ್ತಿಗೌಡ ಕೂಡ ಪರಮಶಿವಯ್ಯಗೆ ಜತೆಯಾಗಿದ್ದರು ಎಂದು ಹೇಳಿದರು.

ಪರಮಶಿವಯ್ಯ ಅವರನ್ನು ಕಳೆದುಕೊಂಡಿದ್ದರೂ ಅವರ ಮಾರ್ಗದರ್ಶನದ ಯೋಜನೆಗಳು ನಮ್ಮಲ್ಲಿವೆ, ಜಿಲ್ಲೆಯಲ್ಲಿ ಟನಾಲ್, ಕೆನಾಲ್ ನಿರ್ಮಿಸಲು ಅವರೇ ಕಾರಣ. ಅವರು ತಿಳಿಸಿರುವ ನೀರಾವರಿ ಯೋಜನೆಗಳ ಉಳಿಸುವ ಕೆಲಸವನ್ನು ಅಧ್ಯಯನ ಪೀಠ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ರೈತರ ಮೂಲ ಸಮಸ್ಯೆಗಳ ಅರಿವು ಪರಮಶಿವಯ್ಯ ಅವರಿಗಿತ್ತು. ಹೇಮಾವತಿಯನ್ನು ಬಯಲುಸೀಮೆಗೆ ಹರಿಸಲೇಬೇಕು ಎಂದು ಅವರು ಶಪಥ ಮಾಡಿ ಅದರಂತೆಯೇ ನಡೆದುಕೊಂಡರು. ಎತ್ತಿನಹೊಳೆ ಯೋಜನೆ ಅವರ ಕನಸಿನ ಕೂಸು. ಅವರ ಕೊಡುಗೆಯನ್ನು ಕರ್ನಾಟಕ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಅಧ್ಯಯನ ಪೀಠದ ಅಧ್ಯಕ್ಷ, ಕಾವೇರಿ ನೀರಾವರಿ ನಿಗಮದ ಎಂಡಿ ಕೆ.ಜೈಪ್ರಕಾಶ್ ಮಾತನಾಡಿ, ನೀರಾವರಿ ನಾಲೆಗಳ ಆಧುನೀಕರಣದಿಂದ ನೀರಿನ ಪರಿಣಾಮಕಾರಿ ಬಳಕೆ ಮಾಡಬಹುದು ಎಂದರು. ರಾಜ್ಯದ ಏಳು ಪ್ರಮುಖ ನದಿ ಮೂಲಗಳಿಂದ 3,440 ಟಿಎಂಸಿ ನೀರು ಸಿಗುತ್ತಿದೆ. ಅದರಲ್ಲಿ ಬಳಕೆಗೆ ಅರ್ಹವಾಗಿರುವುದು 1,440 ಟಿಎಂಸಿ ಮಾತ್ರ.  ಈ ಪೈಕಿ 1,241 ಟಿಎಂಸಿ ನೀರು ಕಾವೇರಿ, ಗೋದಾವರಿ, ಕೃಷ್ಣಾದಿಂದ ದೊರೆಯುತ್ತದೆ ಎಂದರು.

ಎತ್ತಿನಹೊಳೆ ಯೋಜನೆಯಿಂದ ಏಳು ಜಿಲ್ಲೆಗಳ 76 ಲಕ್ಷ ಮಂದಿಗೆ ಅನುಕೂಲವಾಗುತ್ತದೆ. 24 ಟಿಎಂಸಿ ನೀರು ಬಯಲುಸೀಮೆಯ ಬಳಕೆಗೆ ಲಭ್ಯವಾಗುತ್ತದೆ. ಸುಮಾರು 527 ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ವಿವರಿಸಿದರು. ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ತುಮಕೂರು ಜಿಲ್ಲೆಯ ನೀರಾವರಿ ಸಮಸ್ಯೆಗಳ ಅಧ್ಯಯನ ಮತ್ತು ಪರಿಹಾರಗಳ ಅನುಷ್ಠಾನದಲ್ಲಿ ತುಮಕೂರು ವಿವಿ ಸಕ್ರಿಯವಾಗಿ ತೊಗಡಿಕೊಳ್ಳಲಿದೆ ಎಂದರು. ಕುಲಸಚಿವ ಪ್ರೊ. ಕೆ.ಎನ್.ಗಂಗಾನಾಯಕ್, ಪೀಠದ ಎಂಡಿ ಡಾ.ಬಿ.ರವೀಂದ್ರಕುಮಾರ್, ಪ್ರಾಧ್ಯಾಪಕಿ ಕೆ.ಜಿ.ಪರಶುರಾಮ್, ಸಹಾಯಕ ಪ್ರಾಧ್ಯಾಪಕ ಡಾ. ಎಂ.ಮುನಿರಾಜು ಮತ್ತಿತರರು ಇದ್ದರು.

ಬರಪೀಡಿತ ಶಿರಾ ತಾಲೂಕಿನ ಕೆರೆಗಳಿಗೆ ನೀಡಿದ್ದ ಹೇಮಾವತಿ ನೀರನ್ನು ಮಾಜಿ ಸಚಿವ ಜಯಚಂದ್ರ ದುರುಪಯೋಗ ಮಾಡಿಕೊಂಡರು. ನಾಲೆಯಲ್ಲಿ ಅವೈಜ್ಞಾನಿಕವಾಗಿ ಬ್ಯಾರೇಜ್ ನಿರ್ಮಿಸಿ ಕೆರೆ ತುಂಬಿಸಲು ಅಡ್ಡಿಯಾಗಿದ್ದಾರೆ, ಬ್ಯಾರೇಜ್ ನಿರ್ಮಿಸಿರುವ ಕಾರಣಕ್ಕೆ ಶಿರಾ ಕೆರೆಗಳಿಗೆ ಹೇಮಾವತಿ ನೀರು ಹರಿದಿಲ್ಲ. ಜಿ.ಎಸ್.ಬಸವರಾಜು ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net