

ಯಲಬುರ್ಗಾ: ಕೊಪ್ಪಳ ಏತ ನೀರಾವರಿ ಯೋಜನೆಯ ಪ್ಯಾಕೇಜ್-2ರ ಮೇನ್ ರೈಜಿಂಗ್ ಪೈಪ್‌ಲೈನ್ ಕಾಮಗಾರಿ ಮತ್ತು ಯಲಬುರ್ಗಾ ತಾಲೂಕು ಕೆರೆ ತುಂಬಿಸಲು ಅಳವಡಿಸುತ್ತಿರುವ ಪೈಪ್‌ಲೈನ್ ಕಾಮಗಾರಿ ತಡೆ ಹಿಡಿಯುವಂತೆ ಒತ್ತಾಯಿಸಿ ಜಮೀನು ಕಳೆದುಕೊಂಡ ರೈತರು ಮಂಗಳವಾರ ಶಾಸಕ ಹಾಲಪ್ಪ ಆಚಾರ್‌ಗೆ ಮನವಿ ಸಲ್ಲಿಸಿದರು.
ತಾಲೂಕಿನ ಹಿರೇವಂಕಲಕುಂಟಾ ಸುತ್ತಮುತ್ತಲಿನ ಗ್ರಾಮಗಳ ರೈತರು ಕೊಪ್ಪಳ ಏತ ನೀರಾವರಿ ಯೋಜನೆ ಪ್ಯಾಕೇಜ್-2 ಮೇನ್ ರೈಜಿಂಗ್ ಕಾಮಗಾರಿ ಮತ್ತು ಯಲಬುರ್ಗಾ ತಾಲೂಕಿನ ಕೆರೆ ತುಂಬಿಸಲು ಹಾಕುತ್ತಿರುವ ಪೈಪ್‌ಲೈನ್ ಕಾಮಗಾರಿ ಎಂದು ಎರಡು ಕಾಮಗಾರಿ ಸೃಷ್ಟಿಸಿ ರೈತರಿಗೆ ಗೊಂದಲ ಉಂಟು ಮಾಡಿದ್ದಾರೆ. ಕಾಮಗಾರಿ ಉದ್ಘಾಟನೆಯಾಗದೆ ಕೆಲಸ ಪ್ರಾರಂಭಿಸಿದ್ದಾರೆ. ಜಮೀನು ಕಳೆದುಕೊಂಡ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ. ಬಂಡಿವಡ್ಡರ್ ಮತ್ತು ಕಂಪನಿ ಲಿಂಗಸುಗೂರು ಹೆಸರಿನಲ್ಲಿ ಈ ಸ್ಟಾಂಪ್ ಮೇಲೆ ಒಪ್ಪಿಗೆ ಪತ್ರ ಬರೆಯಿಸಿ ಕೊಂಡಿರುತ್ತಾರೆ. ಯೋಜನೆ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಮಾಹಿತಿ ನೀಡಿಲ್ಲ. ಸ್ವಾದೀನ ಪಡಿಸಿಕೊಂಡ ಭೂಮಿಯ ಪರಿಹಾರದ ಹೊಣೆಗಾರಿಕೆ ಯಾರದು ಅನ್ನುವ ಮಾಹಿತಿ ನೀಡದೇ ಕಾಮಗಾರಿ ಆರಂಭಿಸಿದ್ದಾರೆ.
ಕೂಡಲೇ ರೈತರಿಗೆ ಪರಿಹಾರ ಕೊಡಿಸಿ ನಂತರ ಕಾಮಗಾರಿ ಆರಂಭಿಸುವಂತೆ ರೈತರಾದ ಶೇಖರಗೌಡ ಕಾಯಿ, ಶಂಕ್ರವ್ವ ದಾಸರ, ಕಳಕಮ್ಮ ಬಂಗಾರಿ, ವಿಶ್ವನಾಥ ಕಾಯಿ, ಮುದಕನಗೌಡ ಕಾಯಿ, ಶರಣಪ್ಪ ಕಮ್ಮಾರ, ಈಶಪ್ಪ ತೊಣಸಿಹಾಳ, ನರಸಪ್ಪ ದಾಸರ್, ಯಮನಪ್ಪ ಕಂಬಳಿ, ರಾಯನಗೌಡ ಹಳೆಗೌಡ್ರ ಸೇರಿದಂತೆ ಇತರರು ಒತ್ತಾಯಿಸಿದರು.