ನೀರಾವರಿ ಕಚೇರಿ ಸ್ಥಳಾಂತರ ಮಾಡಬೇಡಿ

dvd manavi
ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಜಯ ಕರ್ನಾಟಕ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಮುಖಂಡರಾದ ಸೋಫಿಸಾಬ್ ಉದ್ದಾರ್, ಮಾದವ್‌ರಾವ್ ಉಬಾಳೆ, ಕೆ.ಸುನೀಲ್ ಕುಮಾರ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಚಿಕ್ಕಹೊನ್ನಕುಣಿ ಗ್ರಾಮದಲ್ಲಿರುವ ಕೃಷ್ಣಾಭಾಗ್ಯ ಜಲನಿಗಮದ ವ್ಯವಸ್ಥಾಪಕರ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರ ಮಾಡದಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಮುಖಂಡರು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಶನಿವಾರ ಮನವಿ ಸಲ್ಲಿಸಿದರು.

ನಾರಾಯಣಪುರ ಬಲದಂಡೆ ನಾಲೆಯು ತಾಲೂಕಿನಲ್ಲಿ ಸುಮಾರು 1.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದೆ. ಈ ಭಾಗದ ರೈತರ ಸಮಸ್ಯೆಗೆ ಸ್ಪಂದಿಸಲು ಕೆಬಿಜೆಎನ್‌ಎಲ್ ಕಚೇರಿಯನ್ನು ಚಿಕ್ಕಹೊನ್ನಕುಣಿ ಗ್ರಾಮದಲ್ಲಿ ಆರಂಭಿಸಲಾಗಿದೆ. ಇದರಿಂದ ಹಲವು ರೈತರ ಸಮಸ್ಯೆಗಳಿಗೆ ಪರಿಹಾರ ಕಾಲಕಾಲಕ್ಕೆ ಸಿಗುತ್ತಿದೆ. ಆದರೆ, ರಾಜಕೀಯ ಮುಖಂಡರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರ ಮಾಡುವ ಹುನ್ನಾರ ನಡೆಸಿದ್ದಾರೆ. ಕಚೇರಿ ಸ್ಥಳಾಂತರ ಮಾಡಿದರೆ ತಾಲೂಕಿನ ರೈತರಿಗೆ ಸಮಸ್ಯೆ ಆಗಲಿದ್ದು, ಅಧಿಕಾರಿಗಳನ್ನು ಭೇಟಿಯಾಗಲು ರಾಯಚೂರಿಗೆ ಹೋಗುವಂತ ಸ್ಥಿತಿ ನಿರ್ಮಾಣವಾಗಲಿದೆ ಎಂದು ದೂರಿದರು.

ಚಿಕ್ಕಹೊನ್ನಕುಣಿಯ ಕೆಬಿಜೆಎನ್‌ಎಲ್ ಕಚೇರಿ, ಬಲದಂಡೆ ನಾಲೆ 65 ರಿಂದ 105 ಕಿಮೀವರೆಗೆ ನೀರು ನಿರ್ವಹಣೆ ನೋಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರ ಮಾಡದೆ ಈಗಿರುವ ಸ್ಥಳದಲ್ಲಿ ಮುಂದುವರಿಸಬೇಕು. ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯಾದ ಎನ್‌ಆರ್‌ಬಿಸಿ 106ರಿಂದ 168 ರವರೆಗೆ ವಿಸ್ತರಣೆ ಕಾಲುವೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಕಚೇರಿ ಸ್ಥಳಾಂತರ ಮಾಡುವ ನಿರ್ಧಾರ ಮಾಡಬಾರದು ಎಂದು ಆಗ್ರಹಿಸಿದರು.

ಸಂಘಟನೆ ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಮುಖಂಡರಾದ ಸೋಫಿಸಾಬ್ ಉದ್ದಾರ್, ಮಾದವ್‌ರಾವ್ ಉಬಾಳೆ, ಕೆ.ಸುನೀಲ್ ಕುಮಾರ, ಅಮರೇಶ ಚವ್ಹಾಣ್, ಶಿವಕುಮಾರ, ಮೋಹನ್ ಕಾಂಬ್ಳೇಕರ್, ಮೋಹನ್ ರೆಡ್ಡಿ, ಮುರಿಗೆಯ್ಯ ನಾಯಕ, ಸಂಗು ಕಲ್ಲೂರು, ಶಂಕರ್, ಮಲ್ಲಪ್ಪ ಅಬ್ದುಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net