

ತರೀಕೆರೆ: ಈ ಬಾರಿ ವರುಣ ಕೃಪೆ ತೋರಿರುವುದರಿಂದ ಬತ್ತಿ ಬರಿದಾಗಿದ್ದ ಜಲಮೂಲ ಭರ್ತಿಯಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಬೇಲೇನಹಳ್ಳಿ ತಾಂಡ ಸಮೀಪದ ಕೆಂಗಲಕಟ್ಟೆ ಕೆರೆಯಂಗಳ ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಗಂಗೆ ಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿ ಮಾತನಾಡಿ, ಕ್ಷೇತ್ರದಲ್ಲಿ ನೀರಾವರಿ ವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಡುವ ಉದ್ದೇಶವಿದೆ ಆದರೆ ಅನುದಾನದ ಕೊರತೆ ಇದೆ. ಸದ್ಯದಲ್ಲೇ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಲಿದ್ದು, ಹಂತ ಹಂತವಾಗಿ ಪ್ರಗತಿ ಕೈಗೊಳ್ಳಲಾಗುವುದು ಎಂದರು.
ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿ ಕೆರೆ, ಕಟ್ಟೆ ಜಲಮೂಲ ಭರ್ತಿಯಾಗಿ ಜೀವಕಳೆ ಬಂದಿದೆ. ಸಾವಿರಾರು ಹೆಕ್ಟರ್ ಭೂ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಸಮೃದ್ಧ ಬೆಳೆ ಬರುವ ನಿರೀಕ್ಷೆ ಇದೆ. ರೈತರು ಹನಿ ನೀರಿಗೂ ಮಹತ್ವ ನೀಡಿ ಅನಗತ್ಯ ಪೋಲು ಮಾಡದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ತೀರಾ ಹದಗೆಟ್ಟಿರುವ ಬೇಲೇನಹಳ್ಳಿ ತಾಂಡದಿಂದ ಪಿರಮೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ, ಪಿರಮೇನಹಳ್ಳಿ ಗ್ರಾಮದ ಸರ್ವೇ ನಂ 22ರಲ್ಲಿ ರೈತರು ಸ್ವಾಧೀನದಲ್ಲಿರುವ ಜಮೀನಿಗೆ ಸಾಗುವಳಿ ಚೀಟಿ ಮಾಡಿಸಿಕೊಡುವುದು ಸೇರಿ ರಾಮನಹಳ್ಳಿ ಕೆರೆಗೆ ನೀರು ತುಂಬಿಸಿಕೊಂಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಮಿರ್ಜಾ ಇಸ್ಮಾಯಿಲ್, ಮಾಜಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಆರ್.ಪೀರ‌್ಯಾನಾಯ್ಕ, ಗ್ರಾಮಸ್ಥರಾದ ಭಾಗ್ಯನಾಯ್ಕ, ಎಸ್.ಪರಮೇಶನಾಯ್ಕ, ಸಂತೋಷ್‌ನಾಯ್ಕ ಮತ್ತಿತರರಿದ್ದರು.