ನ್ಯಾಯ ಕೋರಲು ಸಂವಿಧಾನದಲ್ಲಿದೆ ಅವಕಾಶ: ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನ ಕುಮಾರ್ ಸಲಹೆ

Irrigation expert Arjunahalli Prasanna Kumar's speech on Cauvery protest
Published on

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ನ್ಯಾಯಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ರಾಷ್ಟ್ರಪತಿಗೆ ಮನವಿ ಮಾಡಲು ಅವಕಾಶ ಸಂವಿಧಾನಬದ್ಧವಾಗಿದೆ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನ ಕುಮಾರ್ ಸಲಹೆ ನೀಡಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ಅಂತಿಮ ತೀರ್ಪನ್ನು ಒಪ್ಪಿಕೊಂಡಿರುವುದರಿಂದ ಸಂವಿಧಾನಬದ್ಧವಾಗಿ ಇರುವ ಅವಕಾಶ ಬಳಕೆ ಮಾಡಿಕೊಳ್ಳಲು ಮುಂದಾಗಬೇಕಾಗಿದೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಅಂತರ್ಗತ ಅಧಿಕಾರವಿದ್ದು, ವಿವೇಚನೆ ಬಳಸಿ ಕಾವೇರಿ ಸಮಸ್ಯೆ ಕುರಿತ ಅರ್ಜಿ ಸ್ವೀಕರಿಸಿ ವಿಚಾರಣೆ ಮಾಡುವಂತೆ ಕೋರಬಹುದಾಗಿದೆ. ಅದೇ ರೀತಿ ರಾಷ್ಟ್ರಪತಿಯವರಿಗೆ ವಿಶೇಷ ಅಧಿಕಾರ ಇದ್ದು, ಅವರ ಬಳಿಕ ನ್ಯಾಯ ಕೋರಿದರೆ ಕಾವೇರಿ ವಿವಾದ ಸಂಬಂಧ ನಾಲ್ಕು ರಾಜ್ಯಗಳ ಪ್ರದೇಶದಲ್ಲಿ ಅಧ್ಯಯನ ಮಾಡಲು ಸಮಿತಿ ರಚಿಸಬಹುದು. ಸಮಿತಿಯ ವರದಿ ಆಧಾರದ ಮೇಲೆ ತೀರ್ಮಾನ ಮಾಡುವ ಅವಕಾಶವಿದೆ ಎಂದರು.

ಕಾವೇರಿ ನೀರು ಹಂಚಿಕೆ ಸಂಬಂಧ ರಾಜ್ಯಗಳ ನಡುವೆ ವಿವಾದ ಇರುವುದರಿಂದ ಯಾವುದೇ ವ್ಯಕ್ತಿ, ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ಮಾಡಿರುವುದರಿಂದ ಯಾರೇ ಅರ್ಜಿ ಸಲ್ಲಿಸಿದರು ವಜಾ ಆಗಲಿದೆ. ಹಾಗಾಗಿ ಸರ್ಕಾರವೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು, ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಬೇಕು. ಕಾವೇರಿ ತೀರ್ಪಿನಂತೆ ಲೋಕಸಭೆ, ರಾಜ್ಯಸಭೆ ಮಧ್ಯ ಪ್ರವೇಶ ಮಾಡುವಂತಿಲ್ಲ, ಇಂತಹ ಕಾನೂನು ತೊಡಕುಗಳಿವೆ. ರಾಷ್ಟ್ರೀಯ ಜಲನೀತಿ ಇಲ್ಲದಿರುವುದರಿಂದ ಜಲವಿವಾದ ಇತ್ಯರ್ಥ ಸಾಧ್ಯವಿಲ್ಲ. ತಮಿಳುನಾಡಿನ ಒತ್ತಡಕ್ಕೆ ಮಣಿದು ಇದುವರೆಗೂ ರಾಷ್ಟ್ರೀಯ ಜಲ ನೀತಿ ರೂಪಿಸಿಲ್ಲ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ಎಂತೆಂತಹ ಅನ್ಯಾಯವಾಗಿದೆ. ಕರ್ನಾಟಕದ ಪರ ವಾದಿಸಿದ ವಕೀಲ ನಾರಿಮನ್ ಕಾವೇರಿ ನ್ಯಾಯಾಧಿಕರಣ ರಚನೆ ಸಂವಿಧಾನ ಬಾಹಿರವಾಗಿರುವಾಗ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿಗೆ ಅವಕಾಶವಾಗುವಂತೆ ಮಾಡಿದರು. ಮೇಕೆದಾಟು ವಿಚಾರದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಏನು ಮಾಡುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಮೇಕೆದಾಟು ವಿವಾದವನ್ನು ಇಂದಿಗೂ ಜೀವಂತ ಇರಿಸಿದ್ದಾರೆ. ನ್ಯಾಯಾಧೀಕರಣದ ತೀರ್ಪು ಪಾಲನೆ ಮಾಡಬೇಕು ಎಂಬುದಿಲ್ಲ. ಪಂಜಾಬ್ ಸರ್ಕಾರ ನಾಲ್ಕು ದಶಕಗಳಿಂದ ನ್ಯಾಯಾಧೀಕರಣದ ತೀರ್ಪನ್ನು ತಿರಸ್ಕರಿಸುತ್ತಾ ಬಂದಿದೆ. ಆದರೆ ಕರ್ನಾಟಕದಲ್ಲಿ ಅದರ ಪಾಲನೆಯಾಗುವಂತೆ ನೋಡಿಕೊಂಡರು. ವಕೀಲರ ನಿರಂತರ ತಪ್ಪಿನಿಂದ ಕಾವೇರಿ ವಿಚಾರದಲ್ಲಿ ಸಂಕಷ್ಟ ಅನುಭವಿಸಬೇಕಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net