ನೀರಾವರಿ ಅವ್ಯವಸ್ಥೆ ಸರಿಪಡಿಸಿ

17gok1-Web
ಗೋಕಾಕ ನಗರದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ತಾಪಂ ಇಒ ಬಸವರಾಜ ಹೆಗ್ಗನಾಯಿಕ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುನಂದಾ ಕರದೇಸಾಯಿ ಇತರರು ಇದ್ದರು.
Published on

ಗೋಕಾಕ : ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ನೀರಾವರಿಗೆ ಸಂಬಂಧಪಟ್ಟ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಜಲಸಂಪನ್ಮೂಲ ಸಚಿವ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಲಸಂಪನ್ಮೂಲ ಸಚಿವನಾಗಿ ರಾಜ್ಯದ ತುಂಬೆಲ್ಲ ಸುತ್ತುವ ನನಗೆ, ನನ್ನ ಕ್ಷೇತ್ರದಲ್ಲೇ ಅವ್ಯವಸ್ಥೆ ಇದ್ದರೆ ಮುಜುಗರ ಆಗುತ್ತದೆ. ಒಂದು ತಿಂಗಳೊಳಗಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆದೇಶಿಸಿದರು. ಜಿಪಂ ಸದಸ್ಯರಾದ ಟಿ.ಆರ್. ಕಾಗಲ್ ಹಾಗೂ ಮಡ್ಡೆಪ್ಪ ತೋಳಿನವರ ಮಾತನಾಡಿ, ಗೋಕಾಕ ತಾಲೂಕಿನಲ್ಲಿ ಮಾಕರ್ಂಡೇಯ, ಜಿಆರ್‌ಬಿಸಿ ಸೇರಿ ವಿವಿಧ ಕಾಲುವೆಗಳ ಮೂಲಕ ಹರಿಯುವ ನೀರು ಕೊನೆಯ ಹಳ್ಳಿಗಳಿಗೆ ತಲುಪುತ್ತಿಲ್ಲ. ಕಾಲುವೆಗಳ ಗೇಟ್ ಹಾಳಾಗಿವೆ ಎಂದರು. ಬಳಿಕ ಮಾತನಾಡಿದ ಸಚಿವರು, ನೀರಾವರಿ ಇಲಾಖೆಗೆ ಸಂಬಂಧಿಸಿದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಒಂದು ತಿಂಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಗೋಕಾಕ ನಗರದ ಸೌಂದರ್ಯ ಹೆಚ್ಚಿಸಲು ರಸ್ತೆಗಳನ್ನು ಅಗಲೀಕರಣ ಮಾಡಲಾಗಿದೆ. ಆದರೆ, ಮತ್ತೆ ರಸ್ತೆ ಅತಿಕ್ರಮಣದಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜನದಟ್ಪಣೆ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಎಸ್‌ಎಲ್‌ಎಸ್‌ಸಿ ಪರೀಕ್ಷೆ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅಂತರ ಕಾಯ್ದುಕೊಂಡು ಪ್ರತಿ ಕೊಠಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಆರೋಗ್ಯ ತೊಂದರೆ ಆಗದಂತೆ ಜಾಗ್ರತೆ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ನೀರಾವರಿ, ಸಣ್ಣ ನೀರಾವರಿ, ಹೆಸ್ಕಾಂ, ಪಶುಸಂಗೋಪನೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಾವು ಕೈಗೊಂಡ ಕಾರ್ಯಗಳು ಮತ್ತು ಪ್ರವಾಹ ಎದುರಾದರೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ವಿವರಿಸಿದರು. ತಾಲೂಕು ಆಡಳಿತ ವತಿಯಿಂದ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ತಾಪಂ ಇಒ ಬಸವರಾಜ ಹೆಗ್ಗನಾಯಿಕ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ ಹಾಗೂ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net