

ಶಿವಮೊಗ್ಗ: ತುಂಗಾನಗರ ಠಾಣಾ ವ್ಯಾಪ್ತಿಯ ವಿಜಯನಗರದ 2ನೇ ಕ್ರಾಸ್‌ನಲ್ಲಿ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ನಿಯನ್ನು ಕೊಲೆ ಮಾಡಲಾಗಿದೆ.
ವಿಜಯನಗರದ ಕಮಲಮ್ಮ(57) ಕೊಲೆಯಾದ ಮಹಿಳೆ. ಕಮಲಮ್ಮ ಅವರ ಪತಿ ಮಲ್ಲಿಕಾರ್ಜುನ್ ಅವರು ಚಿತ್ರದುರ್ಗದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದಾರೆ. ಪುತ್ರ ದಿಲೀಪ್ ಬೆಂಗಳೂರಿನಲ್ಲಿ ಎಂಬಿಬಿಎಸ್ ಮುಗಿಸಿದ್ದಾರೆ. ಹಾಗಾಗಿ ಕಮ್ಮಲಮ್ಮ ಒಬ್ಬರೇ ಮನೆಯಲ್ಲಿ ಇದ್ದರು. ಶನಿವಾರ ಸಂಜೆಯೇ ಕೊಲೆ ನಡೆದಿರುವ ಸಾಧ್ಯತೆ ಇದೆ.
ಮಲ್ಲಿಕಾರ್ಜುನ್ ಅವರು ಕೆಲವೇ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದು ಶುಕ್ರವಾರ ಬೆಳಗ್ಗೆ ಸ್ನೇಹಿತರೊಂದಿಗೆ ಗೋವಾ ಹೋಗಿದ್ದರು. ಬೆಳಗ್ಗೆ 11.30ರ ಸುಮಾರಿಗೂ ಫೋನ್ ಮಾಡಿ ಮಾತನಾಡಿದ್ದರು. ಅವರ ಪುತ್ರ ಡಾ. ದಿಲೀಪ್ ಕೂಡ ತಾಯಿಗೆ ಕಾಲ್ ಮಾಡಿ ಮಾತನಾಡಿದ್ದರು. ಅದಾದ ಬಳಿಕ ಮಲ್ಲಿಕಾರ್ಜುನ್ ಅವರು ರಾತ್ರಿ 10.30ರ ಸುಮಾರಿಗೆ ಫೋನ್ ಮಾಡಿದ್ದರು. ರಿಸೀವ್ ಮಾಡಿರಲಿಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಕರೆ ಸ್ವೀಕರಿಸಿರಲಿಲ್ಲ.
ಹಾಗಾಗಿ ಆತಂಕಗೊಂಡ ಮಲ್ಲಿಕಾರ್ಜುನ್ ಪರಿಚಯಸ್ಥರು ಮತ್ತು ನೆರೆಹೊರೆಯವರಿಗೆ ಕರೆ ಮಾಡಿ ಮನೆ ಬಳಿ ನೋಡಲು ತಿಳಿಸಿದ್ದಾರೆ. ರಾತ್ರಿ ಆದರೂ ಮನೆ ಬಲ್ಬ್ಗಳನ್ನೂ ಆನ್ ಮಾಡಿರಲಿಲ್ಲ. ಅನುಮಾನಗೊಂಡು ಮನೆ ಬಾಗಿಲು ತೆರದು ನೋಡಿದಾಗ ಅಡುಗೆ ಕೋಣೆಯಲ್ಲಿ ಕಮಲಮ್ಮ ಅವರ ಮೃತದೇಹ ಪತ್ತೆಯಾಗಿದೆ.
ಬಾಯಿ ಮೇಲೆ ಹ್ಯಾಂಡ್ ಟವೆಲ್ ಪತ್ತೆಯಾಗಿದ್ದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಗದು ಮಾತ್ರ ಕಳವು ಮಾಡಲಾಗಿದ್ದು ದಾವಣಗೆರೆಯಿಂದ ಎಫ್‌ಎಸ್‌ಎಲ್ ತಂಡ ಆಗಮಿಸಿ ಪರಿಶೀಲಿಸಿತು. ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.