ನೀರಾವರಿ ಹೊಸ ವಿಧೇಯಕ ರೈತರ ಪಾಲಿಗೆ ಮರಣ ಶಾಸನ: ಮಾಡಾಳು ಮಲ್ಲಿಕಾರ್ಜುನ ಕಿಡಿ

252
Published on

ಚನ್ನಗಿರಿ: ರೈತರ ಪಾಲಿಗೆ ಮರಣ ಶಾಸನದಂತಿರುವ ಕರ್ನಾಟಕ ನೀರಾವರಿ ಅಧಿನಿಯಮದ ಹೊಸ ವಿಧೇಯಕವನ್ನು ಸಿದ್ದರಾಮಯ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ ಆಗ್ರಹಿಸಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿ, ರೈತರು ನೀರು ಬಿಟ್ಟು ಬೇರೆ ಏನನ್ನೂ ಕೇಳುವುದಿಲ್ಲ. ನೀರಾವರಿ ಕಾಲುವೆಗಳಲ್ಲಿ ಕಾನೂನು ಬಾಹಿರವಾಗಿ ಕೊಳವೆ ಹಾಕುವುದನ್ನು ತಡೆಯುವುದು ಮತ್ತು ಕೊನೇಭಾಗಕ್ಕೆ ನೀರು ತಲುಪುವಂತೆ ಮಾಡುವ ಅವಶ್ಯಕತೆ ಇದೆ. ಜಲಾಶಯಗಳಲ್ಲಿ ಹೂಳು ತುಂಬಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದೆಲ್ಲವನ್ನೂ ಕಡೆಗಣಿಸಿರುವ ಸರ್ಕಾರ ರೈತರನ್ನು ಮಣಿಸಲು ತಂತ್ರ ರೂಪಿಸಿದೆ ಎಂದು ಆರೋಪಿಸಿದರು.

ಹೊಸ ವಿಧೇಯಕ ಜಾರಿ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಧ್ವನಿ ಎತ್ತಬೇಕಿತ್ತು. ಬದಲಿಗೆ ಸುಮ್ಮನೆ ಇದ್ದು ಕ್ಷೇತ್ರದ ರೈತರನ್ನು ಕಡೆಗಣಿಸಿದ್ದಾರೆ. ರಾಜ್ಯ ಸರ್ಕಾರ ವಿಧೇಯಕ ಹಿಂಪಡೆಯುವಂತೆ ಒತ್ತಡ ಹೇರಬೇಕು ಅಥವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನಾಲೆ ನೀರು ಪಡೆದ ರೈತರನ್ನು ಅಪರಾಧಿ ಎಂದು ನಿರ್ಣಯ ಮಾಡಿ ದಂಡ ವಿಧಿಸುವುದಾದರೆ, ನೀರನ್ನು ನಂಬಿ ಜೀವನ ಕಟ್ಟಿಕೊಂಡವರ ಪಾಡೇನು? ಎಂದು ಪ್ರಶ್ನಿಸಿದರು.

ಜಲಾಶಯದಿಂದ ಪೋಲಾಗುವ ನೀರನ್ನು ಮಾತ್ರ ರೈತರು ಬಳಸುತ್ತಿದ್ದಾರೆ. ಪಂಪ್‌ಸೆಟ್ ಹಾಕಿರುವವರು ಬಳಸುವುದು ಬೆರಳಣಿಕೆಯಷ್ಟು ನೀರು ಮಾತ್ರ. ಆದ್ದರಿಂದ ಸರ್ಕಾರ ಕಾಯ್ದೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಸ್ತುತ ನಾಲೆ ರೇಖೆಯಿಂದ 500 ಮೀಟರ್‌ನಲ್ಲಿ ಅಸ್ತಿತ್ವದಲ್ಲಿರುವ ಅಂತರ್ಜಲ ಬಳಕೆ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗಿದೆ. ತಿದ್ದುಪಡಿ ಪ್ರಾರಂಭವಾದ ದಿನದಿಂದ 6 ತಿಂಗಳಲ್ಲಿ ನೀರಾವರಿ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಆಗ ಬಳಕೆಗೆ ಬೇಕಾದ ನೀರೆತ್ತುವ ಸಾಧನ ದಿನದಲ್ಲಿ ಎಷ್ಟು ಕಾಲ ಮತ್ತು ವರ್ಷದಲ್ಲಿ ಎಷ್ಟು ಸಮಯ ಬಳಸಲಾಗುತ್ತದೆ ಎಂಬ ಮಾಹಿತಿ ನೀಡಬೇಕಿದೆ. ಇದರಿಂದ ರೈತರು ಕೃಷಿ ಕೆಲಸ ಮರೆತು ಅಧಿಕಾರಿಗಳ ಬಳಿ ಅಲೆಯಬೇಕಾಗುತ್ತದೆ. ಆದ್ದರಿಂದ ಕರ್ನಾಟಕ ನೀರಾವರಿ ಅಧಿನಿಯಮ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ತುಮ್‌ಕೋಸ್ ಅಧ್ಯಕ್ಷ ಆರ್.ಎಂ. ರವಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಿಂಗದಳ್ಳಿ ಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಪಿ. ಲೋಹಿತ್‌ಕುಮಾರ್, ರುದ್ರೇಶ್ ಗೌಡ್ರು, ಪುರಸಭೆ ಸದಸ್ಯೆ ಕಮಲಾ ಹರೀಶ್, ಪಾರಿ ಪರಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net