

ಕೆ.ಆರ್.ಸಾಗರ: ಬೆಳೆಗಳಿಗೆ ಹಾಗೂ ಕುಡಿಯಲು ಕಟ್ಟು ಪದ್ಧತಿಯಡಿ ನೀರು ಹರಿಸಬೇಕು ಎಂದು ಶುಕ್ರವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಾವೇರಿ ನದಿ ಪಾತ್ರದಲ್ಲಿ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಬೇಸಿಗೆ ಆರಂಭಕ್ಕೂ ಮುನ್ನವೇ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸದ್ಯ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ಮುಂದಿನ ಮೇ ತನಕ ಬಳಸಬೇಕಿದೆ. ಆದ್ದರಿಂದ ನೀರನ್ನು ಅಗತ್ಯಕ್ಕನುಗುಣವಾಗಿ ಹರಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಸಮಿತಿ ಸಮಿತಿ ಮುಖಂಡ ಕೆ.ಎಸ್ ನಂಜುಂಡೇಗೌಡ ಕೋರಿದರು.
ಕೆ.ಆರ್.ಸಾಗರ ಟೋಲ್‌ನಲ್ಲಿ ಅವಧಿ ಮುಗಿದಿದ್ದರೂ ಹಣ ಸಂಗ್ರಹಿಸಲಾಗುತ್ತಿದೆ. ಬೃಂದಾವನ ಪ್ರವೇಶ ದ್ವಾರ ಮತ್ತು ವಾಹನ ಪ್ರವೇಶ ಶುಲ್ಕ ಟೆಂಡರ್‌ದಾರನ ಅವಧಿ ಮುಗಿದಿದ್ದರೂ ಮತ್ತೆ ಹೊರಗುತ್ತಿಗೆ ಮೂಲಕ ಅವಕಾಶ ನೀಡಲಾಗಿದೆ. ಗುತ್ತಿಗೆ ಕೆಲಸ ಮಾಡುತ್ತಿರುವ ಕೆ.ಸಿ.ಐ.ಸಿ. ಕಂಪನಿ, ಪ್ರವಾಸಿಗರು ಮತ್ತು ಸ್ಥಳೀಯರ ಜತೆ ಸರ್ವಾಧಿಕಾರಿ ರೀತಿ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು, ವಿಶ್ವ ಬ್ಯಾಂಕ್ ಯೋಜನೆಡಿ ನಡೆಯುತ್ತಿರುವ ಅಣೆಕಟ್ಟೆ ಪುನಶ್ಚೇತನ ಕಾಮಗಾರಿ ಗುಣಮಟ್ಟ ಮತ್ತು ಪಾರದರ್ಶಕತೆಯಿಂದ ಕೂಡಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕುತ್ತರಿಸಿದ ಕಾ.ನೀ.ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಫಾರೂಕ್ ಅಭು, ನೀರಿನ ಸಮಸ್ಯೆ ಕುರಿತು ಡಿ.19 ರಂದು ನೀರಾವರಿ ಸಲಹಾ ಸಮಿತಿ ಸಭೆ ನಡೆಯಲ್ಲಿದೆ. ಕಾನೂನು ಪ್ರಕಾರ ಗುತ್ತಿಗೆ ನೀಡಲಾಗಿದೆ. ಕೆ.ಸಿ.ಐ.ಸಿ. ಕಂಪನಿಯ ದುರ್ನಡತೆ ಕಂಡು ಬಂದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಡ್ರಿಪ್ ಕಾಮಗಾರಿ ಗುಣಮಟ್ಟದಿಂದ ಕೂಡಿದ್ದು, ನುರಿತ ತಜ್ಞರು ಪರಿಶೀಲಿಸುತ್ತಿದ್ದಾರೆ. ಅನುಮಾನ ಇದ್ದಲ್ಲಿ ವಿಡಿಯೋ ದಾಖಲಾತಿ ಪರಿಶೀಲಿಸಬಹುದು ಎಂದರು.
ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಮಹದೇವಣ್ಣ, ಹನಿಯಬ್ಬಾಂಡಿ ನಾಗರಾಜು, ರವಿಲಕ್ಷ್ಮಣ, ರಮೇಶ್ ಅಚ್ಚಪನಕೊಪ್ಪಲು, ವಸಂತಕುಮಾರ್, ರಾಮಕೃಷ್ಣ, ಪಾಲಹಳ್ಳಿ ರಾಮಚಂದ್ರು, ಹೊಸಹಳ್ಳಿ ಸ್ವಾಮಿ, ಬೆಳಗೊಳ ವಿಷಕಂಠ ಇತರರು ಇದ್ದರು.