

ಚಿಕ್ಕಬಳ್ಳಾಪುರ: ಅಧಿಕಾರಿಗಳು ಮತ್ತು ಕಂಪನಿ ಸಿಬ್ಬಂದಿಯ ಲೋಪ ದೋಷ ಕೆಲಸದ ಹಿನ್ನೆಲೆಯಲ್ಲಿ ಬೆಳೆ ನಷ್ಟ ಅನುಭವಿಸಿದ ಅನೇಕ ರೈತರಿಗೆ ವಿಮೆ ಹಣ ಸಿಗದಿರುವುದರ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವತ: ಕೃಷಿ ಇಲಾಖೆಯ ಅಧಿಕಾರಿಗಳು, ಅನನುಭವಿ ಸಿಬ್ಬಂದಿಯಿಂದ ಅವೈಜ್ಞಾನಿಕ ಬೆಳೆ ನಷ್ಟ ಸರ್ವೇ, ಮಾಹಿತಿ ದಾಖಲಿಸುವಲ್ಲಿ ನಷ್ಟ ಪರಿಗಣಿಸದಿರುವುದು ಸೇರಿದಂತೆ ಹಲವು ಲೋಪದೋಷಗಳ ಬಗ್ಗೆ ಒಪ್ಪಿಕೊಂಡರು. ಇದಕ್ಕೆ ಸಂಬಂಧಿಸಿದಂತೆ ಜಂಟಿ ಕೃಷಿ ನಿರ್ದೇಶಕರು, ತಹಸೀಲ್ದಾರ್ರನ್ನೊಳಗೊಂಡಂತೆ ಸಮಿತಿಯನ್ನು ರಚಿಸಿದ್ದು ಮೇಲ್ನೋಟಕ್ಕೆ ತಪುಗಳು ಕಂಡು ಬಂದಿವೆ. ವರದಿ ಬಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಬಾಗೇಪಲ್ಲಿ ತಾಲೂಕಿನ 7 ಗ್ರಾ.ಪಂ.ಗಳಲ್ಲಿನ ರೈತರಿಗೆ ಪರಿಹಾರ ಸಿಗದಿರುವುದರ ಬಗ್ಗೆ ವಿಮಾ ಸಂಸ್ಥೆ ಹೇಳಿದೆ. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲಾಗಿದೆ. ಮಳೆಯ ಅಭಾವದಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು ಸರ್ಕಾರವು ಬರಗಾಲ ಘೋಷಿಸಿದೆ. ಇದರ ಅರಿವಿದ್ದರೂ ಉತ್ತಮ ಇಳುವರಿಯ ಮಾಹಿತಿ ನಮೂದಿಸಿ, ರೈತರನ್ನು ಸೌಲಭ್ಯ ವಂಚಿತರನ್ನಾಗಿಸಲಾಗಿದೆ. ಕಳೆದ ಸಾಲಿನಲ್ಲೂ ಉಂಟಾಗಿದ್ದ ಸಮಸ್ಯೆಯು ಪುನರಾವರ್ತನೆಯಾಗಿದೆ ಎಂದು ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಕಡಿವಾಣ ಬಿದ್ದಿಲ್ಲ. ಬಾಗೇಪಲ್ಲಿಯಲ್ಲಿ ಕಷ್ಟಪಟ್ಟು ಬೆಳೆದ ರೈತ ತೋಟದಲ್ಲಿ ಗೋಲಿ ಮಾದರಿಯ ಟೊಮ್ಯಾಟೋಗಳು ಬಂದಿವೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಇದಕ್ಕೆ ಕಳಪೆ ಗುಣಮಟ್ಟ ಬಿತ್ತನೆ ಬೀಜ ಪೂರೈಕೆಗೆ ಸಂಬಂಧಿಸಿದಂತೆ ಖಾಸಗೀ ಕಂಪನಿ ಮತ್ತು ಡೀಲರ್ಗೆ ನೋಟಿಸ್ ನೀಡಲಾಗಿದೆ. ಗ್ರಾಹಕರ ನ್ಯಾಯಾಲಯದಲ್ಲೂ ಪ್ರಕರಣ ದಾಖಲಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಗಾಯಿತ್ರಿ ತಿಳಿಸಿದರು.