ಬಬಲೇಶ್ವರ ಕ್ಷೇತ್ರದ ಮತಪಟ್ಟಿಯಲ್ಲಿ ಅಕ್ರಮ - ಆರ್.ಎಸ್. ಪಾಟೀಲ ಕೂಚಬಾಳ

R S Patil Kuchabal
Published on

ವಿಜಯಪುರ: ಕಳೆದ 2018ರ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಅಕ್ರಮ ಮತದಾರರಿಂದಾಗಿ ಬಿಜೆಪಿ ಅಭ್ಯರ್ಥಿ ಪರಾಭವಗೊಳ್ಳಬೇಕಾಯಿತು. ಈ ಬಾರಿ ಅದಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, 11 ಸಾವಿರ ಅಕ್ರಮ ಮತದಾರರ ಹೆಸರು ಈಗಾಗಲೇ ಡಿಲೀಟ್ ಮಾಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಪ್ರತಿಕ್ರಿಯಿಸಿದರು.

ಪ್ರಧಾನಿ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ ಬಂದರೂ ಬಬಲೇಶ್ವರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲರ ಹೇಳಿಕೆಗೆ ಸಂಬಂಧಿಸಿದಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಇದ್ದ ಸ್ಥಿತಿ ಈಗಿಲ್ಲ. ಚುನಾವಣೆಯಿಂದ ಚುನಾವಣೆಗೆ ಪರಿಸ್ಥಿತಿ ಬದಲಾಗಲಿದೆ. ಈ ಬಾರಿ ಬಿಜೆಪಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ ಎಂದರು.

ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ 25 ಸಾವಿರ ಹೆಸರುಗಳನ್ನು ಅಕ್ರಮವಾಗಿ ಮತದಾರರ ಯಾದಿಗೆ ಸೇರ್ಪಡೆ ಮಾಡಿದ ಪರಿಣಾಮ ಅಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಪ್ರಭಾವಿ ಖಾತೆ ಹೊಂದಿದ್ದ ಸಚಿವರೇ ತಮ್ಮ ಅಧಿಕಾರ ಪ್ರಯೋಗಿಸಿ ಅನಧಿಕೃತವಾಗಿ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಿದ್ದರು, ಇದೀಗ ಆಧಾರ್ ಲಿಂಕ್ ಆಗಿರುವ ಕಾರಣ 11 ಸಾವಿರ ಮತಗಳು ಡಿಲೀಟ್ ಆಗಿವೆ. ಹೀಗಾಗಿ ಈ ಬಾರಿ ಗೆಲುವು ನಮ್ಮದೇ ಎಂದರು.

ಕಾಂಗ್ರೆಸ್ ಪಕ್ಷದ ನಾಯಕರು ಹಗರಣಗಳಲ್ಲಿಯೇ ವಿಶ್ವದಾಖಲೆ ಮಾಡಿದ್ದಾರೆ. ಈಗ ಆ ಪಕ್ಷದ ನಾಯಕ ರಾಹುಲ್ ಗಾಂಧಿ ಭ್ರಷ್ಟಾಚಾರ, ಪರಿಶುದ್ಧ ಆಡಳಿತದ ಬಗ್ಗೆ ಮಾತನಾಡುತ್ತಾರೆ, ಒಂದು ರೀತಿ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ. ನೆಹರೂ ಅವರ ಕಾಲದಲ್ಲಿ ಜೀಪ್, ರಾಜೀವಗಾಂಧಿ ಅವರ ಕಾಲದಲ್ಲಿ ಬೊಫೋರ್ಸ್, ಯುಪಿಎ ಸರ್ಕಾರದಲ್ಲಿ 2ಜಿ, ಕಾಮನವೆಲ್ತ್ ಹೀಗೆ ಹಗರಣಗಳ ಸರಮಾಲೆಯೇ ಇದೆ ಎಂದು ದೂರಿದರು.

ಮುಖಂಡರಾದ ಡಾ.ಸುರೇಶ ಬಿರಾದಾರ, ಸಂಜಯ ಪಾಟೀಲ ಕನಮಡಿ, ಮಲ್ಲಿಕಾರ್ಜುನ ಜೋಗೂರ, ಉಮೇಶ ಕೋಳಕೂರ ಮತ್ತಿತರರಿದ್ದರು.
*

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net