ನರೇಗಾ ಕಾಮಗಾರಿಯಲ್ಲಿ ಅಕ್ರಮ

Narega work
ಕನಕಗಿರಿ ತಾಲೂಕಿನ ಚಿಕ್ಕವಡ್ರಕಲ್‌ನಲ್ಲಿ ನರೇಗಾದಡಿ ಕೈಗೊಳ್ಳಲಾಗಿದೆ ಎನ್ನಲಾದ ಹೂಳೆತ್ತುವ ಕಾಮಗಾರಿ ಸ್ಥಳವನ್ನು ತಾಪಂ ಎಡಿ ಶರಪೂನ್ನಿಸಾ ಬೇಗಂ ವೀಕ್ಷಿಸಿದರು. ಪಿಡಿಒ ಅಮರೇಶ ರಾಠೋಡ್, ಕಾರ್ಯದರ್ಶಿ ಶಿವರಾಜ ಪಾಟೀಲ್, ತನ್ವಿರ್, ದೂರುದಾರರಾದ ಯಮನೂರಪ್ಪ ಇತರರಿದ್ದರು.
Published on

ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ಆಕ್ರಮ ನಡೆದಿರುವ ದೂರಿನ ಹಿನ್ನೆಲೆಯಲ್ಲಿ ನರೇಗಾ ಸಹಾಯಕ ನಿರ್ದೇಶಕಿ ಶರಪೂನ್ನಿಸಾ ಬೇಗಂ ಸೋಮವಾರ ಸ್ಥಳ ಪರಿಶೀಲನೆ ನಡೆಸಿ, ಕೆಲಸ ನಡೆದಿರುವುದರ ಬಗ್ಗೆ ಖಾತರಿ ಮಾಡಿಕೊಂಡರು.

ದೇವಲಾಪುರ ಗ್ರಾಮದಲ್ಲಿ ಹಿರೇವಡ್ರಕಲ್ ಸೀಮಾದಿಂದ ನಿಂಗಪ್ಪ ದಳಪತಿ ಜಮೀನಿನವರೆಗೆ ಹಾಗೂ ಚಿಕ್ಕವಡ್ರಕಲ್ ಗ್ರಾಮದಲ್ಲಿ ನಾಲಾ ಹೂಳೆತ್ತುವ ಕಾಮಗಾರಿಯನ್ನು ಆ.16ರಿಂದ 29ರವರೆಗೆ ಹಾಗೂ ಸೆ.29ರಿಂದ ಅ.8ರವರೆಗೆ ಮಾಡಲಾಗಿದೆ ಎಂದು ಅಧಿಕಾರಿಗಳು 201 ಕಾರ್ಮಿಕರಿಗೆ ಕೂಲಿ ಪಾವತಿ ಮಾಡಿರುತ್ತಾರೆ. ಆದರೆ, ವಾಸ್ತವದಲ್ಲಿ ಈ ಕಾಮಗಾರಿಗಳೇ ನಡೆದಿರುವುದಿಲ್ಲ ಎಂದು ಗ್ರಾಮಸ್ಥರಾದ ಅಂಬರೇಷ, ರಾಘವೇಂದ್ರ, ಯಮನೂರಪ್ಪ ಇತರರು ನ.19ರಂದು ದೂರು ಸಲ್ಲಿಸಿದ್ದರು.

ಗ್ರಾಪಂ ಅಧ್ಯಕ್ಷ, ಅಧಿಕಾರಿಗಳ ಕೈವಾಡದಿಂದ ಕಾರ್ಮಿಕರಿಗೆ ಹಣ ಸಂದಾಯ ಮಾಡಿ ನಂತರ ವಾಪಾಸ್ ಪಡೆದು ಲಕ್ಷಾಂತರ ರೂ. ಲಪಟಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ತಾಪಂ ಇಒಗೆ ಮನವಿ ಸಲ್ಲಿಸಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದರು.

ತಾಪಂ ಸಹಾಯಕ ನಿರ್ದೇಶಕ ಗ್ರಾಪಂ ಭೇಟಿ ನೀಡಿ, ದೂರುದಾರರಿಂದ ಮಾಹಿತಿ ಪಡೆದುಕೊಂಡು, ಕಾಮಗಾರಿ ನಡೆಸಿದ ಫೋಟೊಗಳನ್ನು ದೂರುದಾರರಿಗೆ ತೋರಿಸಿದ್ದಾಗ ಒಂದು ಕ್ಷಣ ನಿಬ್ಬೆರಗಾಗಿದ್ದಾರೆ. ಆದರೆ, ದೂರುದಾರರ ಆಗ್ರಹದಂತೆ ಚಿಕ್ಕವಡ್ರಕಲ್ ಕಾಮಗಾರಿ ಸ್ಥಳಕ್ಕೆ ತೆರಳಿದಾಗ ಯಾವ ಕುರುಹು ಇರಲಿಲ್ಲ. ನಂತರ ದೇವಲಾಪುರ ಕಾಮಗಾರಿ ಸ್ಥಳಕ್ಕೆ ತೆರಳಿದಾಗ 15 ದಿನಗಳ ಹಿಂದಷ್ಟೇ ಕಟಾವು ಮಾಡಿದ ಭತ್ತದ ಗದ್ದೆ ಇದ್ದುದು ಕಂಡು ಬಂದಿತು.

ಆಗ ಕೆಲ ಸ್ಥಳೀಯರು ಹಾಗೂ ದೂರುದಾರರ ನಡುವೆ ವಾಗ್ವಾದ ನಡೆಯಿತು. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಕಾಮಗಾರಿ ನಡೆದಿದೆ ಎಂದು ಬಿಲ್ ಮಾಡಲಾಗಿದೆ. ಆದರೆ, ಭತ್ತದ ಗದ್ದೆ ಎಷ್ಟು ತಿಂಗಳ ಬೆಳೆ ಎಂದು ದೂರುದಾರರು ಪ್ರಶ್ನಿಸಿದರು. ಇಲ್ಲಿ ಕೆಲಸ ನಿರ್ವಹಿಸಲು ಕಿರಿಕಿರಿ ಮಾಡಿದ್ದರಿಂದ ಸ್ಮಶಾನದಲ್ಲಿ ಕೆಲಸ ನಿರ್ವಹಿಸಲಾಗಿದೆ ಎಂದು ತಿಳಿಸಿ ಆರೋಪದಿಂದ ಮುಕ್ತರಾಗಲು ಪ್ರಯತ್ನಿಸಿದರು.

ಪಿಡಿಒ ಅಮರೇಶ ರಾಠೋಡ್, ಕಾರ್ಯದರ್ಶಿ ಶಿವರಾಜ ಪಾಟೀಲ್, ತನ್ವಿರ್, ದೂರುದಾರರಾದ ಯಮನೂರಪ್ಪ, ರಾಘವೇಂದ್ರ, ಗ್ರಾಪಂ ಸದಸ್ಯ ಕೃಷ್ಣ ಪ್ರಮುಖರಾದ ರಾಮನಗೌಡ ಇತರರಿದ್ದರು.

ದೂರುದಾರರು ತಾಪಂ ಇಒಗೆ ಬೋಗಸ್ ಬಿಲ್ ಆಗಿದೆ ಎಂದು ದೂರು ಸಲ್ಲಿಸಿದ್ದರು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಮೂರ‌್ನಾಲ್ಕು ದಿನಗಳಲ್ಲಿಯೇ ವರದಿ ಸಲ್ಲಿಸಲಾಗುವುದು.

ಶರಪೂನ್ನಿಸಾ ಬೇಗಂ, ತಾಪಂ ಸಹಾಯಕ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net