ಎಚ್.ಡಿ.ಕೋಟೆ ಪುರಸಭೆಯಲ್ಲಿ ಅಕ್ರಮ : ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಕೆ

hd kote
Published on

ಮೈಸೂರು: ಎಚ್.ಡಿ. ಕೋಟೆ ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಡಿ.ಎನ್. ವಿಜಯಕುಮಾರ್ ಹಾಗೂ ಹಿಂದಿನ ಕಂದಾಯಾಧಿಕಾರಿ ಹಾಗೂ ಹಾಲಿ ಮುಖ್ಯಾಧಿಕಾರಿ ಪಿ. ಸುರೇಶ್ ಅಧಿಕಾರಾವಧಿಯಲ್ಲಿ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ 20 ಜೂನ್ 2023 ರಂದು ಜಿಲ್ಲಾಧಿಕಾರಿಗೆ ನೀಡಿದ ದೂರಿನ ಮೇರೆಗೆ ಜಿಲ್ಲಾಧಿಕಾರಿ ನಿರ್ದೇಶನ ಮೇರೆಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಎಚ್.ಡಿ. ಕೋಟೆಗೆ ಭೇಟಿ ನೀಡಿ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು.

ಐವರ ವಿರುದ್ಧ ಕ್ರಮಕ್ಕೆ ವರದಿ:

ಎಚ್.ಡಿ. ಕೋಟೆ ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಡಿ.ಎನ್. ವಿಜಯಕುಮಾರ್ ಹಾಗೂ ಹಿಂದಿನ ಕಂದಾಯಾಧಿಕಾರಿ ಹಾಗೂ ಹಾಲಿ ಮುಖ್ಯಾಧಿಕಾರಿ ಪಿ. ಸುರೇಶ್, ಸಮುದಾಯ ಸಂಘಟಕಿ (ಪ್ರಭಾರ ಕಂದಾಯ ನಿರೀಕ್ಷಕಿ) ವೀಣಾ, ಲೆಕ್ಕಿಗ ಪರಮೇಶ್, ಕಿರಿಯ ಇಂಜಿನಿಯರ್ ಸುರೇಶ್, ಪರಿಸರ್ ಇಂಜಿನಿಯರ್ ರಕ್ಷಿತ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇತ್ತೀಚೆಗೆ ಪೌರಾಡಳಿತ ನಿರ್ದೇಶನಾಲಯಕ್ಕೆ ತನಿಖಾ ವರದಿ ಆಧರಿಸಿ ಜಿಲ್ಲಾಧಿಕಾರಿ ನಿರ್ದೇಶನ ಪ್ರಕಾರ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕ ಮುರುಗೇಶ್ ‘ವಿಜಯವಾಣಿ’ಗೆ ತಿಳಿಸಿದರು.

ಆರೋಪವೇನು?:

ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಬಡಾವಣೆಗಳ ಶೇ.100 ರಷ್ಟು ಅಭಿವೃದ್ಧಿ ಕಾಮಗಾರಿಗಳು ಪೂರ್ಣ ಗೊಳ್ಳದೆ ಸಂಬಂಧಿಸಿದ ಇಲಾಖೆಗಳಿಂದ ನಿರಾಕ್ಷೇಪಣ ಪತ್ರ ಪಡೆಯದೆ, ಕೌನ್ಸಿಲ್ ಸಭೆಯಲ್ಲಿ ಬಡಾವಣೆಗಳ ಪೂರ್ಣಗಳ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡದೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಬಡಾವಣೆಯ ಮಾಲೀಕರುಗಳಿಗೆ ಶೇ.100 ರಷ್ಟು ನಿವೇಶನಗಳನ್ನು ನಿಯಮ ಬಾಹಿರವಾಗಿ ನೀಡಲಾಗಿದೆ.

ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಸಂಬಂಧಿಸಿದ ತಾಂತ್ರಿಕ ಶಾಖೆಯಿಂದ ವರದಿ ಪಡೆಯದೆ ನಿಯಮ ಬಾಹಿರವಾಗಿ ನಿವೇಶನಗಳನ್ನು ಬಿಡುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪುರಸಭೆ ವತಿಯಿಂದ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿರುತ್ತದೆ. ಇದರಿಂದ ಪುರಸಭೆಗೆ ಆರ್ಥಿಕ ನಷ್ಟ ಉಂಟಾಗಲಿದೆ.

ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿ ಮೂರು ವರ್ಷಗಳಿಗೊಮ್ಮೆ ಟೆಂಡರ್ ಕರೆಯಬೇಕು. ಆದರೆ, 4 ವರ್ಷ ಕಳೆದರೂ ಎಚ್.ಡಿ. ಕೋಟೆಯಲ್ಲಿ ಟೆಂಡರ್ ಕರೆಯದೆ ಇರುವುದು ತನಿಖೆಯಲ್ಲಿ ಕಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net