ಕೊಬ್ಬರಿ ಖರೀದಿಯಲ್ಲಿ ಅಕ್ರಮವೆಸಗಿದ ಅಧಿಕಾರಿಗಳ ಅಮಾನತುಗೊಳಿಸಿ: ನಾಗಮಂಗಲ ಪಟ್ಟಣದಲ್ಲಿ ರೈತರ ಪ್ರತಿಭಟನಾ ಮೆರವಣಿಗೆ

Irregularity in coconut purchase registration mandya
Published on

ನಾಗಮಂಗಲ: ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಕೇಂದ್ರಕ್ಕೆ ಸಂಬಂಧಿಸಿದಂತೆ ನೋಂದಣಿಯಲ್ಲಿ ವಂಚನೆ ಮಾಡಿರುವ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ರೈತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರವಾಸಿಮಂದಿರ ವೃತ್ತದಲ್ಲಿ ಜಮಾಯಿಸಿದ ರೈತರು, ರೈತ ಸಂಘ(ಮೂಲ ಸಂಘಟನೆ) ನೇತೃತ್ವದಲ್ಲಿ ಮೆರವಣಿಗೆ ಹೊರಟು ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ತಾಲೂಕಿನ ಕದಬಹಳ್ಳಿ ಎಂಪಿಎಂಸಿ ಆವರಣದಲ್ಲಿ ಕೊಬ್ಬರಿ ಕೇಂದ್ರವನ್ನು ತೆರೆಯಲಾಗಿದೆ. ಖರೀದಿಗೆ ರೈತರಿಂದ ನೋಂದಣಿ ಮಾಡಿಕೊಳ್ಳದೇ ದಲ್ಲಾಳಿ ಮತ್ತು ರಾಜಕಾರಣಿಗಳ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಎರಡೇ ದಿನದಲ್ಲಿ ಖರೀದಿ ಕೇಂದ್ರ ಬಾಗಿಲು ಮುಚ್ಚಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಅಧ್ಯಕ್ಷ ಎಲ್.ಸುರೇಶ್ ಮಾತನಾಡಿ, ಕೊಬ್ಬರಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದಿದ್ದು, ನೋಂದಣಿ ಮಾಡಿದ ಅಧಿಕಾರಿಗಳನ್ನು ಈ ತಕ್ಷಣ ಅಮಾನತು ಮಾಡಬೇಕು. ಪ್ರಸ್ತುತ ನಡೆದಿರುವ ನೋಂದಣಿಯನ್ನು ರದ್ದು ಮಾಡಿ ಕೊಬ್ಬರಿ ಖರೀದಿಗೆ ಮರು ನೋಂದಣಿ ಮಾಡಬೇಕು ಎಂದು ಒತ್ತಾಯಿಸಿದರು.

ಖಂಜಾಚಿ ಬೋರೇಗೌಡ ಮಾತನಾಡಿ, ನೆಪಮಾತ್ರಕ್ಕೆ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ರಾಜಕಾರಣಿ ಮತ್ತು ದಲ್ಲಾಳಿಗಳ ಮನೆ ಮನೆಗೆ ಹೋಗಿ ನೋಂದಣಿ ಮಾಡಿದ್ದಾರೆ. ಇಂತಹ ಅಕ್ರಮವನ್ನು ಸಹಿಸುವುದಿಲ್ಲ. ರೈತರಿಗೆ ನ್ಯಾಯ ಬದ್ಧವಾಗಿ ನೋಂದಣಿ ಮಾಡಿ ಕೊಬ್ಬರಿ ಖರೀದಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ರಾಜಣ್ಣ, ಹೋಬಳಿ ಅಧ್ಯಕ್ಷ ತಿಮ್ಮೇಗೌಡ, ಸಿದ್ದಲಿಂಗಯ್ಯ, ಕಿರಣ್ ಚಿಕ್ಕೇಗೌಡ, ಪುಟ್ಟೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net