ಮರಣ ದೃಢೀಕರಣ ಪತ್ರದಲ್ಲಿ ಅವ್ಯವಹಾರ; ತನಿಖೆಗೆ ಮನವಿ

MDK05
Published on

ಮಡಿಕೇರಿ: ಮರಣ ದೃಢೀಕರಣ ಪತ್ರದಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಪರ ಜಿಲ್ಲಾಧಿಕಾರಿಗಳಾದ ಡಾ.ನಂಜುಂಡೇಗೌಡರವರಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭ ಮಾತನಾಡಿದ ವೇದಿಕೆ ಅಧ್ಯಕ್ಷ ರವಿಗೌಡ, ಮಡಿಕೇರಿ ತಾಲೂಕಿನ ನಾಪೋಕ್ಲು ಹೋಬಳಿಗೆ ಸಂಬಂಧಪಟ್ಟವರ ಮರಣ ದೃಢೀಕರಣ ಪತ್ರ ನೀಡುವಂತೆ ಮಡಿಕೇರಿ ತಾಲೂಕು ಕಛೇರಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಪರಿಶೀಲಿಸಿದ ತಾಲೂಕು ಕಛೇರಿ ಸಿಬ್ಬಂದಿಗಳು ನಮ್ಮಲ್ಲಿ ಮರಣ ದೃಢೀಕರಣ ಪತ್ರ ಇಲ್ಲವೆಂದು ಪರಿಶೀಲನೆಗೆ ಸ್ಥಳೀಯ ನಾಪೋಕ್ಲುವಿನ ನಾಡಕಚೇರಿಗೆ ನೀಡುವಂತೆ ಅರ್ಜಿ ಕಳಿಸಿಕೊಟ್ಟಿದ್ದಾರೆ. ಈ ಸಂದರ್ಭ ಪರಿಶೀಲನೆ ನಡೆಸಿದ ಗ್ರಾಮ ಲೇಕ್ಕಿಗರು ಹಾಗೂ ನಾಡ ಕಚೇರಿಯಿಂದ ನಮ್ಮಲ್ಲಿ ಮರಣ ದೃಢೀಕರಣ ಪತ್ರವಿಲ್ಲ ಎಂಬುದಾಗಿ ಮಹಾಜರ್ ಮಾಡಿದ ದಾಖಲೆಗಳನ್ನು ಮಡಿಕೇರಿ ತಾಲೂಕು ಕಚೇರಿಗೆ ನೀಡಿದ್ದಾರೆ ಎಂದು ವಿವರಿಸಿದರು.


ಮಡಿಕೇರಿ ತಾಲೂಕು ಕಚೇರಿಯಲ್ಲಿ ವರದಿ ಪರಿಶೀಲಿಸಿದ ನಂತರ ನ್ಯಾಯಾಲಯದಲ್ಲಿ ಮರಣ ದೃಢೀಕರಣ ಪತ್ರ ಪಡೆದುಕೊಳ್ಳಲು ತಾಲೂಕು ಕಚೇರಿಯಿಂದ ಅಲಭ್ಯ ಪ್ರಮಾಣ ಪತ್ರ ನೀಡಿರುತ್ತಾರೆ. ಆದರೆ, ಹಲವು ವರ್ಷದ ಹಿಂದೆ ಮರಣ ದೃಢೀಕರಣ ಪತ್ರವನ್ನು ನೀಡಿದ್ದಾರೆ ಎಂದು ಮರಣ ದೃಢೀಕರಣ ಪತ್ರದಲ್ಲಿ ನಮೂದು ಆಗಿದೆ. ಮರಣ ದೃಢೀಕರಣ ಪತ್ರ ಇಲ್ಲದ ಮೇಲೆ ಈ ಮರಣ ದೃಢೀಕರಣ ಪತ್ರ ಎಲ್ಲಿಂದ ಬಂದಿದೆ? ಇದರ ಹಿಂದೆ ಹಲವು ಕಾಣದ ಕೈಗಳ ಕೈವಾಡವಿದ್ದು, ಈ ವಿಚಾರವಾಗಿ ದಂಧೆನಡೆಯುತ್ತಿದೆ ಎಂದು ಆರೋಪಿಸಿದ ಅವರು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ವೇದಿಕೆ ಸದಸ್ಯ ಅಜಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net