

ಕುಂದಗೋಳ: ಸರ್ಕಾರಿ ಕಚೇರಿಗಳ ಸಮಯ ಬೆಳಗ್ಗೆ 10 ಗಂಟೆಯಿಂದ 5.30ರವರೆಗೆ ನಿಗದಿಪಡಿಸಲಾಗಿದೆ. ಆದರೆ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಬೆಳಗ್ಗೆ 11.30 ಗಂಟೆಯಾದರೂ ಹಾಜರಿರುವುದಿಲ್ಲ.
ಎಲ್ಲ ಸರ್ಕಾರಿ ಇಲಾಖೆಗಳ ಕಚೇರಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಾತಿಗಾಗಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಈ ಕಚೇರಿಯಲ್ಲಿ ಬಯೋಮೆಟ್ರಿಕ್ ಜಾರಿಮಾಡಿಲ್ಲ. ನೋಟ್ಬುಕ್ನಲ್ಲಿ ಸಹಿ ಮಾಡುತ್ತ ನಿಯಮಗಳನ್ನು ಗಾಳಿಗೆ ತೂರಿ, ಸಮಯ ಪ್ರಜ್ಞೆ ಮರೆಯುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಒಟ್ಟು 11 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರೆಲ್ಲರೂ ಹಾಜರಾತಿಗೆ ಬಯೋಮೆಟ್ರಿಕ್ ಇಲ್ಲದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಮನಸೋ ಇಚ್ಛೆ ಕಚೇರಿಗೆ ಬರುತ್ತಾರೆ. ಜವಾನನನ್ನು ಬಿಟ್ಟು ಉಳಿದ ಅಧಿಕಾರಿಗಳಾಗಲಿ, ಸಿಬ್ಬಂದಿ ಬರುವುದೇ ಇಲ್ಲ. ಹೀಗಾಗಿ ಸಾರ್ವಜನಿಕರ ಕೆಲಸ ಕಥೆ ಏನು ಎಂದು ಪ್ರಶ್ನಿಸುವಂತಾಗಿದೆ. ಲೋಕೋಪಯೋಗಿ ಕಚೇರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಚೇರಿಗೆ ತಡವಾಗಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ರೀತಿ ಕಚೇರಿಗೆ ತಡವಾಗಿ ಬಂದರೆ ನಮ್ಮ ಕೆಲಸ, ಕಾರ್ಯಗಳು ಹೇಗೆ ಆಗುತ್ತವೆ. ಸರ್ಕಾರದ ಕೆಲಸವನ್ನು ಇವರು ಹೇಗೆ ನಿರ್ವಹಿಸುತ್ತಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಗಳು ಕ್ರಮ ಕೈಗೊಳ್ಳಬೇಕು. | ಗಣೇಶ ಕೋಕಾಟೆ, ಪಟ್ಟಣ ಪಂಚಾಯಿತಿ ಸದಸ್ಯ, ಕುಂದಗೋಳ
ಕುಂದಗೋಳದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಒಟ್ಟು 11 ಜನ ಅಧಿಕಾರಿಗಳ ಪೈಕಿ ಇಬ್ಬರು ಅಧಿಕಾರಿಗಳು ಎರವಲು ಸೇವೆಯಲ್ಲಿದ್ದಾರೆ. ಇನ್ನಿಬ್ಬರು ಅಧಿಕಾರಿಗಳು ರಜೆಯಲ್ಲಿದ್ದಾರೆ. ಒಬ್ಬ ಸೆಕ್ಷನ್ ಆಫೀಸರ್ ಇಂಗಳಗಿ ಬ್ರಿಡ್ಜ್ ಕಡೆ ಹೋಗಿದ್ದು, ಬೆಟಗೇರಿ ಎಂಬುವವರು ಕಚೇರಿ ಆಗಮಿಸುವಾಗ ವಾಹನದ ಬ್ಯಾಟರಿ ಸಮಸ್ಯೆಯಾಗಿದ್ದು ತಡವಾಗಿ ಬರುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಸಿಬ್ಬಂದಿ ತಡವಾಗಿ ಆಗಮಿಸಿದ್ದಾರೆ. | ಸುಧಾಕರ ಬಾಗೇವಾಡಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕುಂದಗೋಳ