ಕಬ್ಬಿಣದ ಆ್ಯಂಗಲ್ ಪಟ್ಟಿ ಬಿದ್ದು ಮಕ್ಕಳಿಗೆ ಗಾಯ

19ANKOLA 1
Published on

ಅಂಕೋಲಾ: ಲಾರಿಯೊಂದರಲ್ಲಿ ಸಾಗಿಸುತ್ತಿದ್ದ ಕಬ್ಬಿಣದ ಆ್ಯಂಗಲ್ ಪಟ್ಟಿಗಳು ಕೆಳಗೆ ಉರುಳಿದ ಪರಿಣಾಮ ರಸ್ತೆ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ರಾ.ಹೆ. 66ರ ನೀಲಪುರ ಕ್ರಾಸ್ ಬಳಿ ಸಂಭವಿಸಿದೆ.
ಇಲ್ಲಿಯ ಅಜ್ಜಿಕಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಗಳಾದ ಹಾವೇರಿ ಜಿಲ್ಲೆ ಯ ನೆಟ್ಟೂರಿನ ದರ್ಶನ ಕೆಂಚಪ್ಪ ಕಂಡೋಜಿ (12) ಮತ್ತು ಡುಮ್ಮಿಹಾಳದ ಕಿರಣ ಹನುಮಂತಪ್ಪ ಮೇಗಲಮನೆ (12) ತಮ್ಮ ಸಹಪಾಠಿಗಳೊಂದಿಗೆ ವಿಠ್ಠಲಘಾಟ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ಮೈಮೇಲೆ ಕಾರವಾರ ಕಡೆಯಿಂದ ಕುಮಟಾ ಕಡೆಗೆ ಸಂಚಾರಿಸುತ್ತಿದ್ದ ಟ್ರಾಲಿ ಲಾರಿಯಲ್ಲಿದ್ದ ಕಬ್ಬಿಣದ ಆ್ಯಂಗಲ್ ಪಟ್ಟಿಗಳು ಜಾರಿ ಬಿದ್ದಿವೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರಿಬ್ಬರಿಗೆ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಪಿಐ ಸಂತೋಷ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಉದ್ದಪ್ಪ ಧರೆಪ್ಪನವರ, ಸುನೀಲ ಹುಲ್ಲೊಳ್ಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಲಾರಿ ಮತ್ತು ಚಾಲಕ ಮಹಾರಾಷ್ಟ್ರ ಕೊಲ್ಲಾಪುರದ ಸಾಗೋಲಾದ ವಿಜಯ ಬಲಭೀಮ್ ಬಾಲುಡೊರಲೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ನವೀನ ಗಾಂವಕರ, ದರ್ಶನ ನಾಯ್ಕ, ಬದ್ರುದ್ದೀನ್ ಶೇಖ್, ಪೊಲೀಸ್ ಸಿಬ್ಬಂದಿ ಪುನೀತ ನಾಯ್ಕ, ಸತೀಶ ನಾಯ್ಕ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net