30 ವರ್ಷದಿಂದ ಜೀವನಾಧಾರ ಇರೋಲ್: ವಾಮಂಜೂರಿನ ಮಹಿಳೆಯ ಬದುಕು ನಡೆಯುವುದು : ಈ ಹಣ್ಣಿನಿಂದ ಬೇಸಿಗೆಯಲ್ಲಿ ಭಾರಿ ಡಿಮಾಂಡ್

New Project (19)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಮಧ್ಯಾಹ್ನದ ಹೊತ್ತಿಗೆ ಬಿರುಬಿಸಿಲಿಂದ ದಣಿದವರು ಸಾಮಾನ್ಯವಾಗಿ ಅಂಗಡಿಗಳಲ್ಲಿ ತಂಪು ಪಾನೀಯ, ಸೀಯಾಳ ಕುಡಿಯುವುದುಂಟು. ಹಿಂದೆ ಹಳ್ಳಿಗಳಲ್ಲಿ ಬಡವರ ದಣಿವಾರಿಸಲು ಕೈಗೆಟುಕುತ್ತಿದ್ದ ‘ಇರೋಲ್’(ತಾಳೆ ಅಥವಾ ತಾರಿ ಮರದ ಹಣ್ಣು) ಇಂದು ರಸ್ತೆ-ಹೆದ್ದಾರಿ ಬದಿಗಳಲ್ಲೂ ಶ್ರೀಮಂತರಿಗೂ ಅತಿ ಪ್ರಿಯವಾಗಿದ್ದರೆ ಅಚ್ಚರಿಪಡಬೇಕಿಲ್ಲ. ಪ್ರತಿವರ್ಷ ಬೇಸಗೆ ಕಾಲದಲ್ಲಿ ವಾಮಂಜೂರು ಜಂಕ್ಷನ್‌ನಲ್ಲಿ ಕಾಣಸಿಗುವ ಮೀನಾ ಎಂಬುವರು ಇರೋಲ್ ಮಾರುತ್ತ ತನ್ನ ಜೀವನ ಕಟ್ಟಿಕೊಂಡಿದ್ದಾರೆ ಎಂಬುದು ವಿಶೇಷ.

ಮೀನಾ ಅವರು ಮೂಲತಃ ತಮಿಳುನಾಡಿನವರು. ತಂದೆ-ತಾಯಿ ತಮಿಳುನಾಡಿನವರಾಗಿದ್ದರೂ, ಈಕೆ ಹುಟ್ಟಿದ್ದು ಮಾತ್ರ ಮಂಗಳೂರಿನಲ್ಲಿ. 30 ವರ್ಷದಿಂದ ಇಲ್ಲಿ ಇರೋಲ್ ಮಾರುತ್ತ ಜೀವನ ಸಾಗಿಸುತ್ತಿರುವ ಈಕೆಯ ಇಬ್ಬರು ಗಂಡು ಮಕ್ಕಳು ಹತ್ತಿರದ ಹೈಸ್ಕೂಲ್‌ಗೆ ಹೋಗುತ್ತಿದ್ದಾರೆ. 9 ವರ್ಷದ ಹಿಂದೆ ಪತಿ ಮೃತರಾಗಿದ್ದು, ಅದುವರೆಗೂ ಅವರು ಪತ್ನಿಯೊಂದಿಗೆ ಇರೋಲ್ ತೆಗೆದು ಮಾರಾಟ ಮಾಡುತ್ತಿದ್ದರು. ನಂತರದ ವರ್ಷದಲ್ಲಿ ಸಹೋದರ ಜತೆಗಿದ್ದರೂ ಆತ 2 ವರ್ಷದ ಹಿಂದೆ ಮೃತರಾದರು. ಆದರೂ ಧೃತಿಗೆಡದ ಮೀನಾ, ಇಬ್ಬರು ಕೂಲಿಯಾಳುಗಳ ಸಹಾಯದಿಂದ ಇರೋಲ್ ತೆಗೆಸಿ ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.

ಕೂಲಿಯಾಳುಗಳ ಸಮಸ್ಯೆ: ಹಿಂದೆ ಪೆರ್ಮಂಕಿ, ಉಳಾಯಿಬೆಟ್ಟು, ಗುರುಪುರ, ಪರಾರಿ ಮತ್ತಿತರ ಕಡೆಗಳಿಂದ ಇರೋಲ್ ತೆಗೆಯುತ್ತಿದ್ದರೆ, ಕೂಲಿಯಾಳುಗಳ ಸಮಸ್ಯೆಯಿಂದ ಈಗ ಗುರುಪುರ ಮತ್ತು ಪರಾರಿಯಿಂದ ಮಾತ್ರ ಇರೋಲ್ ಪಡೆಯುತ್ತಿದ್ದಾರೆ. ವರ್ಷದ 6 ತಿಂಗಳು ಮಾರಾಟವಿದ್ದರೆ, ಉಳಿದ 6 ತಿಂಗಳು ಮನೆಯಲ್ಲೇ ಇರಬೇಕಾಗುತ್ತದೆ.

ಇಳುವರಿ ನೋಡಿ ಬೆಲೆ ನಿರ್ಧಾರ: ಇರೋಲ್ ಇಳುವರಿ ನೋಡಿಕೊಂಡು ಒಂದು ತಾಳೆ ಮರಕ್ಕೆ ಬೆಲೆ ಕಟ್ಟಲಾಗುತ್ತದೆ. ಹೆಚ್ಚೆಂದರೆ ಒಂದು ತಾಳೆ ಮರಕ್ಕೆ 200 ರೂ., ಕಡಿಮೆ ಎಂದರೆ 100 ರೂ. ಕೊಡಬೇಕಾಗುತ್ತದೆ. 20 ವರ್ಷಗಳ ಹಿಂದೆ ಕೆಲವರು ಒಂದು ತಾಳೆ ಮರದ ಇರೋಲ್‌ಗೆ ಇಷ್ಟೇ ಹಣ ಕೊಡಬೇಕೆಂದು ಹೇಳುತ್ತಿರಲಿಲ್ಲ. ಈಗ ಎಲ್ಲ ಕಡೆ ಹಣ ಕೊಟ್ಟು ಇರೋಲ್‌ಗಾಗಿ ಮರ ಖರೀದಿಸಬೇಕಾಗುತ್ತದೆ. ಬಿಸಿಲಿನ ತಾಪ ಕಡಿಮೆ ಮಾಡಲು ಹಾಗೂ ಬೇಸಗೆಯಲ್ಲಿ ಆರೋಗ್ಯ ಕಾಪಾಡುವಲ್ಲಿ ಪ್ರಕೃತಿದತ್ತ ಇರೋಲ್ ಪಾತ್ರ ಬಹಳಷ್ಟಿದೆ. ಒಂದೆರಡು ಇರೋಲ್ ಒಂದು ಸೀಯಾಳಕ್ಕೆ ಸಮಾನ ಎಂದು ಹೇಳುತ್ತಾರೆ.

ನಾನು ವಾಮಂಜೂರಿಗೆ ಹತ್ತಿರದಲ್ಲಿ ವಾಸಿಸುತ್ತಿದ್ದು, ಇಲ್ಲಿನ ಬಸ್ ನಿಲ್ದಾಣಕ್ಕೆ ಬರುವಾಗ ಮೀನಾರನ್ನು ಮಾತಾಡಿಸಿಕೊಂಡು ಹೋಗುತ್ತೇನೆ. ಕೆಲವು ಬಾರಿ ಇರೋಲ್ ಖರೀದಿ ಮಾಡುತ್ತೇನೆ. ಇವರಲ್ಲಿ ಉತ್ತಮ ಆಯ್ಕೆಯ ಇರೋಲ್ ಇರುತ್ತದೆ. ಇರೋಲ್ ಸ್ವಾದ ಎಲ್ಲರಿಗೂ ಗೊತ್ತಿಲ್ಲ. ಅದು ಆರೋಗ್ಯಕ್ಕೆ ಒಳ್ಳೆಯದು. ಸ್ಥಳೀಯ ಮಹಿಳೆ ಬೇಸಗೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಾಮಂಜೂರು ಜಂಕ್ಷನ್‌ನಲ್ಲಿ ವ್ಯಾಪಾರ ಮಾಡುತ್ತೇನೆ. ಕಳೆದ ವರ್ಷ ಹಾಗೂ ಈ ವರ್ಷ ಮೂರು ಕಣ್ಣುಗಳ ಒಂದು ಇರೋಲ್‌ಗೆ 30 ರೂ. ಪಡೆಯುತ್ತಿದ್ದೇನೆ. ಮಂಗಳೂರಿಗೆ ಹೋದರೆ ರೇಟ್ ಭಿನ್ನವಾಗಿರುತ್ತದೆ. ಬಿಸಿಲು ಹೆಚ್ಚಾದಾಗ ಇರೋಲ್‌ಗೆ ಬೇಡಿಕೆ ಜಾಸ್ತಿಯಾಗುತ್ತದೆ. ಈ ವರ್ಷ ಆರಂಭದಲ್ಲಿ ವ್ಯಾಪಾರ ಇದ್ದರೂ, ಈಗ ವ್ಯಾಪಾರ ಕುಸಿದಿದೆ. ಕೆಲವೊಮ್ಮೆ ದಿನಕ್ಕೆ ಸಾವಿರ ರೂಪಾಯಿಯಷ್ಟು ವ್ಯಾಪಾರವಾಗುತ್ತದೆ. ಈ ವೃತ್ತಿಯೇ ನನ್ನ ಕುಟುಂಬಕ್ಕೆ ಆಧಾರ. ಮೀನಾ, ಇರೋಲ್ ಮಾರುವವರು https://www.vijayavani.net/mla-visits-mulki-tahsildars-office https://www.vijayavani.net/farewell-to-balanja-school-teacher-gretta

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net