ಜಲ ಸುಂದರಿ 'ಇರ್ಕಿಗದ್ದೆ' ಫಾಲ್ಸ್​...

Falls 1
Published on

ಹಸಿರು ಕಾನನದೊಳು ನೀರಿನ ಚಿತ್ತಾರ

ಪ್ರಕೃತಿಯ ಸೊಬಗು ನಯನ ಮನೋಹರ

ಪ್ರಶಾಂತ ಭಾಗ್ವತ ಉಡುಪಿ

ಮಳೆಗಾಲದಲ್ಲಿ ಎಲ್ಲೂ ಪ್ರವಾಸಕ್ಕೆ ಹೋಗಲಾಗದ ಚಿಂತೆ ಕಾಡುತ್ತಿದೆಯಾ? ಆ ಚಿಂತೆಯನ್ನು ಚೇತೋಹಾರಿಯಾಗಿಸಲು ಜಲ ಸುಂದರಿಯೊಬ್ಬಳು ದಟ್ಟ ಕಾನನದ ಮಧ್ಯೆ ಮೈದುಂಬಿ ಹರಿಯುತ್ತಿದ್ದಾಳೆ. ಪ್ರಕೃತಿ ಸೊಬಗಿನ ಸವಿ ಆಸ್ವಾದಿಸಲು ಆಹ್ವಾನಿಸುತ್ತಿದ್ದಾಳೆ.

ಮಳೆಗಾಲದಲ್ಲಿ ಮಾತ್ರ ಜೀವ ತಳೆಯುವ ಕುಂದಾಪುರದ ಇರ್ಕಿಗದ್ದೆ ಫಾಲ್ಸ್​ ಉತ್ತಮವಾದ ಪಿಕ್​ನಿಕ್​ ಸ್ಪಾಟ್​ ಆಗಿದ್ದು, ಇತ್ತೀಚೆಗೆ ಸಾಕಷ್ಟು ಖ್ಯಾತಿ ಗಳಿಸಿದೆ. ಮಳೆಗಾಲದಲ್ಲಿ ಪ್ರವಾಸಿಗರು ಭೇಟಿ ನೀಡಬಹುದಾದ ಒಳ್ಳೆಯ ಪ್ರವಾಸಿ ತಾಣವಾಗಿದೆ.

ಎಲ್ಲಿದೆ ಜಲಪಾತ?

Falls 2
ಕುಂದಾಪುರದಿಂದ 44 ಕಿಮೀ ದೂರದಲ್ಲಿ ಮಚ್ಚಟ್ಟು ಗ್ರಾಮದ ತೊಂಬಟ್ಟು ಎಂಬಲ್ಲಿ ಈ ಜಲಪಾತವಿದೆ. ತೊಂಬಟ್ಟು ಫಾಲ್ಸ್​, ಇರ್ಕಿಗದ್ದೆ ಫಾಲ್ಸ್​ ಅಥವಾ ಹೊಸಂಗಡಿ ಫಾಲ್ಸ್​ ಎಂದೂ ಕರೆಯುತ್ತಾರೆ. ಸೋಮೇಶ್ವರ ಅಭಯಾರಣ್ಯದ ಆಗುಂಬೆ ವನ್ಯಜೀವಿ ವಲಯದ ಅಮಾಸೆಬೈಲು ವ್ಯಾಪ್ತಿಯಲ್ಲಿದೆ. ಕುಂದಾಪುರದಿಂದ ಹಾಲಾಡಿ, ಅಮಾಸೆಬೈಲು ಮಾರ್ಗವಾಗಿ ಹಾಗೂ ಕುಂದಾಪುರದಿಂದ ಸಿದ್ಧಾಪುರ, ಹೊಸಅಂಗಡಿ ಮಾರ್ಗವಾಗಿ ಈ ಜಲಪಾತ ತಲುಪಬಹುದು.

ಅಂದ, ಬಲು ಆನಂದ

ಅತಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಇದಲ್ಲ. ಆದರೆ, ಬಂಡಗಲ್ಲುಗಳ ನಡುವೆ ಅತ್ತಿತ್ತ ಸುಳಿಯುತ್ತ ಮುಂದೆ ಸಾಗುವ ರೀತಿಯೇ ಬಲು ಸುಂದರ. ಪಶ್ಚಿಮ ಘಟ್ಟದ ತಪ್ಪಲಿನ ದಟ್ಟ ಕಾಡಿನ ನಡುವೆ ಹರಿಯುವ ಹೊಳೆಯಿಂದ ಜಲಪಾತ ಸೃಷ್ಟಿಯಾಗಿದೆ. ವನರಾಶಿಯ ಮಧ್ಯೆ ಬಂಡೆಗಳ ಮೇಲಿಂದ ಹಾಲಿನ ನೊರೆಯಂತೆ ಧುಮ್ಮಿಕ್ಕುವ ಈ ಜಲಪಾತದ ಸೊಬಗಿನ ಅಂದ ನೋಡುವುದೇ ಬಲು ಆನಂದ.

ಅರಣ್ಯ ಇಲಾಖೆ ಕಣ್ಗಾವಲು

Falls Banner
ಸಂರಕ್ಷಿತ ಅಭಯಾರಣ್ಯದ ಒಳಗೆ ಜಲಪಾತ ಇರುವುದರಿಂದ ಅರಣ್ಯ ಇಲಾಖೆಯವರ ಕಣ್ಗಾವಲು ಇದೆ. ಭಾರಿ ಮಳೆ ಸುರಿಯುತ್ತಿದ್ದು, ಜಲಪಾತ ಭೋರ್ಗರೆಯುತ್ತಿದೆ. ಜೀವಾಪಾಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನೀರಿನ ಸಮೀಪ ಹೋಗದಂತೆ ನಿರ್ಬಂಧಿಸಿ ಎಚ್ಚರಿಕೆಯ ಫಲಕವನ್ನೂ ಇಲಾಖೆ ಅಳವಡಿಸಿದೆ.

ಪರಿಸರದ ಸ್ವಚ್ಛತೆ ಕಾಪಾಡಿ

ಉಡುಪಿ ಜಿಲ್ಲೆ ಪ್ರಾಕೃತಿಕವಾಗಿ ಸಮೃದ್ಧವಾಗಿರುವ ಜಿಲ್ಲೆ. ಮಳೆಗಾಲದಲ್ಲಿ ಇರ್ಕಿಗದ್ದೆ ಫಾಲ್ಸ್ ನಂತೆ ಅನೇಕ ಜಲಪಾತಗಳು ಆಕರ್ಷಣೆಯ ಕೇಂದ್ರವಾಗುತ್ತವೆ. ಇಂತಹ ಪ್ರದೇಶಗಳಿಗೆ ಪ್ರವಾಸ ಕೈಗೊಂಡು ಪ್ರಕೃತಿಯನ್ನು ಆರಾಧಿಸಿ, ಹೃನ್ಮನಗಳಲ್ಲಿ ತುಂಬಿಕೊಂಡು ಬನ್ನಿ. ಆದರೆ, ಪಿಕ್​ನಿಕ್​ ನೆಪದಲ್ಲಿ ಕುಡಿದು ಮೋಜು-ಮಸ್ತಿ ಮಾಡಬೇಡಿ. ತಿಂದು ಅಳಿದುಳಿದ ಆಹಾರ ಪದಾರ್ಥ, ಪ್ಲಾಸ್ಟಿಕ್​ ತ್ಯಾಜ್ಯವನ್ನು ಅಲ್ಲಿಯೇ ಎಸೆದು ಬರಬೇಡಿ. ಪ್ರವಾಸ ಮಗಿಸಿ ಬರುವಾಗ ಕಸ-ತ್ಯಾಜ್ಯಗಳನ್ನೂ ತಂದು ಕಸದ ಬುಟ್ಟಿಗೇ ಹಾಕಿ. ಕಾಡಿನ, ಪ್ರಕೃತಿಯ ಸ್ವಚ್ಛತೆ ಕಾಪಾಡಿ. ಇದು ವಿಜಯವಾಣಿಯ ಕಳಕಳಿ.

ಕುತೂಹಲ ಹೆಚ್ಚಿಸಿದ ಕಾಂತಾರ!

Falls 3
ಉಡುಪಿ ಜಿಲ್ಲೆಯವರಿಗೆ ಮಾತ್ರ ಇರ್ಕಿಗದ್ದೆ ಜಲಪಾತದ ಮಾಹಿತಿ ಇತ್ತು. ಈ ಜಲಪಾತದಲ್ಲಿ ಕಾಂತಾರ ಸಿನಿಮಾದ ಒಂದೆರಡು ದೃಶ್ಯ ಚಿತ್ರೀಕರಣಗೊಂಡು ತೆರೆಯ ಮೇಲೆ ಕಂಡ ಬಳಿಕ ನೂರಾರು ಜನ ಇಲ್ಲಿಗೆ ಭೇಟಿ ನೀಡುವಂತಾಗಿದೆ. ಕಾಂತಾರ ಚಿತ್ರದಲ್ಲಿ ನಾಯಕ ಮತ್ತು ಆತನ ತಂಡ ಅರಣ್ಯ ಅಧಿಕಾರಿಯಿಂದ ತಪ್ಪಿಸಿಕೊಂಡು ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾಗ ನಾಯಕಿ ಊಟ ತಂದು ಕೊಡುವ ದೃಶ್ಯ ಇಲ್ಲಿಯೇ ಚಿತ್ರೀಕರಣವಾಗಿತ್ತು.

ಇರ್ಕಿಗದ್ದೆ ಫಾಲ್ಸ್​ನಲ್ಲಿ ಅನಿಯಂತ್ರಿತವಾಗಿ, ರಭಸವಾಗಿ ನೀರು ಬೀಳುತ್ತಿದೆ. ಹೀಗಾಗಿ ಫಾಲ್ಸ್​ ವೀಕ್ಷಣೆಗೆ ನಿರ್ಬಂಧವಿದೆ. ಇಲಾಖೆಯಿಂದ ಅಧಿಕೃತವಾಗಿ ಟಿಕೆಟ್​ ವ್ಯವಸ್ಥೆ ಅಥವಾ ಪ್ರವಾಸಕ್ಕೆ ಪೂರಕವಾದ ವ್ಯವಸ್ಥೆಯೂ ಅಲ್ಲಿಲ್ಲ. ಪ್ರವಾಸಿಗರ ರಕ್ಷಣೆಗೆ ಸಿಬ್ಬಂದಿ ಕೊರತೆಯೂ ಇದೆ. ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ, ಒಳ್ಳೆಯ ಪ್ರವಾಸಿ ತಾಣ ಮಾಡುವ ಯೋಚನೆ ಇಲಾಖೆಗಿದೆ. | ದಿನೇಶ ಜಿ.ಡಿ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಿದ್ಧಾಪುರ ವನ್ಯಜೀವಿ ಉಪವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net