11 ದಿನಗಳ ಉತ್ತರಾಖಂಡ ಯಾತ್ರೆ

IRCTC
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಆಗಸ್ಟ್ 22ರಿಂದ ಸೆಪ್ಟೆಂಬರ್ 1ರವರೆಗೆ 11 ದಿನಗಳ ಕಾಲ ದೇವಭೂಮಿ ಉತ್ತರಾಖಂಡ ಯಾತ್ರೆ-ಪ್ರವಾಸ ಆಯೋಜಿಸಲಾಗಿದೆ ಎಂದು ಇಂಡಿಯನ್ ರೈಲ್ವೆ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೆರೇಷನ್ ಲಿಮಿಟೆಡ್ (ಐಆರ್​ಸಿಟಿಸಿ)ನ ಹಿರಿಯ ಕಾರ್ಯನಿರ್ವಾಹಕ ಪ್ರಜೀತ ಎಂ. ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾತ್ರಿಕರಿಗೆ ಭಾರತ ಗೌರವ ಮಾನಸಖಂಡ ಎಕ್ಸ್​ಪ್ರೆಸ್ ರೈಲಿನ ಎಸಿ-3 ಬೋಗಿಯಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಹವಾನಿಯಂತ್ರಿತವಲ್ಲದ ಹೋಮ್ ಸ್ಟೇ, ಅತಿಥಿ ಗೃಹ ಅಥವಾ ಬಜೆಟ್ ಹೊಟೇಲ್​ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣದ ಸಮಯದಲ್ಲಿ ರೈಲಿನಲ್ಲಿ ಬೆಳಗಿನ ಚಹಾ, ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸಲಾಗುವುದು. ಯಾತ್ರಿಕರು ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಮಾಡಿಸಬೇಕು ಎಂದರು.

22ರಂದು ಬೆಳಗ್ಗೆ 7 ಗಂಟೆಗೆ ರೈಲು ಬೆಂಗಳೂರಿನಿಂದ ಹೊರಡಲಿದೆ. ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಪುಣೆ, ಸೂರತ್, ವಡೋದರಾದಲ್ಲಿ ಯಾತ್ರಿಕರನ್ನು ಈ ರೈಲಿನಲ್ಲಿ ಹತ್ತಿಸಿಕೊಳ್ಳಲಾಗುವುದು. ಭೀಮತಾಲ್-ನೈನಿತಾಲ್​ನ ನೈನಾದೇವಿ ದೇವಸ್ಥಾನ ಮತ್ತು ನೈನಿ ಸರೋವರ, ಕೈಂಚಿ ಧಾಮ್ ಬಾಬಾ ನೀಮ್ ಕರೋಲಿ ದೇವಸ್ಥಾನ, ಕಸರ್ ದೇವಿ ದೇವಸ್ಥಾನ, ಕತರ್ಮಲ್ ಸೂರ್ಯ ದೇವಾಲಯ, ಜಾಗೇಶ್ವರ ಧಾಮ್ ಚಿಟೈ, ಅಲ್ಮೋರಾ, ಬೈಜಿನಾಥ್, ಬಾಗೇಶ್ವರ, ಕೌಸನಿ ಹಾಗೂ ರಾಣಿಖೇತ್ ಗಳಿಗೆ ಭೇಟಿ ಮಾಡಿಸಲಾಗುವುದು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net