ಶಿರೂರು ದುರಂತಕ್ಕೆ ಐಆರ್‌ಬಿ, ಕೇಂದ್ರ ಹೊಣೆ: ಸಚಿವ ಮಾಂಕಾಳ ವೈದ್ಯ ಆರೋಪ

Mankal Vaidya
Published on

ಮಂಗಳೂರು: ಅಂಕೋಲಾದ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತ ದುರಂತಕ್ಕೆ ಐಆರ್‌ಬಿ (ಐಡಿಯಲ್ ರೋಡ್ ಬಿಲ್ಡರ್ಸ್) ಮತ್ತು ಕೇಂದ್ರ ಸರ್ಕಾರ ನೇರ ಹೊಣೆ ಎಂದು ರಾಜ್ಯ ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರ ಜತೆ ಮಾತನಾಡಿದ ಅವರು, ಜು.11ರಂದು ಗುಡ್ಡ ಕುಸಿತ ದುರಂತ ಸಂಭವಿಸಿದೆ. ಅವತ್ತಿನಿಂದ ತಾನು ಅಲ್ಲೇ ಇದ್ದೇನೆ. ಬೆಂಗಳೂರಿನ ಅಧಿವೇಶನವನ್ನು ಬಿಟ್ಟು ತಾನು ಮತ್ತು ಶಾಸಕ ಸತೀಶ್ ಸೈಲ್ ಅಲ್ಲೇ ಇದ್ದೆವು. ನಮ್ಮಿಂದ ಏನು ಮಾಡಲು ಸಾಧ್ಯವೋ, ಅದನ್ನೆಲ್ಲ ಮಾಡಿದ್ದೇವೆ. ಕಳೆದ 11 ವರ್ಷದಿಂದ ಐಆರ್‌ಬಿ ಕಾಮಗಾರಿ ನಡೆಸುತ್ತಿದ್ದು, ಇನ್ನೂ ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಅವರ ಅವೈಜ್ಞಾನಿಕ ಕಾಮಗಾರಿಯಿಂದ ಈ ದುರಂತ ಸಂಭವಿಸಿದೆ. ಅವರಲ್ಲಿ ಒಂದು ಹಿಟಾಚಿ ಕೂಡ ಇಲ್ಲ. ಅದನ್ನು ಕೂಡ ನಾವು ಬೇರೆ ಕಡೆಯಿಂದ ತರಿಸಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ತಂಡ ಇಂಥದ್ದೇ ಜಾಗದಲ್ಲಿ ಕುಸಿಯುತ್ತದೆ ಎಂದು ಹೇಳಿದ್ದರೂ, ಏನೂ ಮಾಡಲಾಗಲಿಲ್ಲ. ಬೇರೆ ರಾಜ್ಯದವರೂ ಸಾವಿಗೀಡಾಗಿದ್ದಾರೆ. ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಾವು ನ್ಯಾಯವಾಗಿ ಅಲ್ಲಿ ಇದ್ದೇವೆ. ಈಗ ಆಗಬಾರದ್ದು ಆಗಿಹೋಗಿದೆ. ಯಾರೂ ಯೋಚನೆ ಮಾಡದ ರೀತಿ ಗುಡ್ಡ ಕುಸಿತವಾಗಿದೆ ಎಂದರು.

ಯಾರಿಗೂ ತಿಳಿದಿಲ್ಲ ನಿಖರ ಮಾಹಿತಿ

ಕೇರಳದ ಲಾರಿ ಹೊಳೆಯಲ್ಲಿ ಇರುವುದು ಗೊತ್ತಾಗಿದೆ. ಅದನ್ನು ನೋಡಲು ತೆರಳಲು ಸಾಧ್ಯವಾಗುತ್ತಿಲ್ಲ. ನೌಕಾಸೇನೆ, ಕೋಸ್ಟ್‌ಗಾರ್ಡ್ ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಸಂತ್ರಸ್ತರ ಕುಟುಂಬಕ್ಕೆ ಏನಾದರೂ ಸಹಾಯ ಮಾಡುವುದಿದ್ದರೆ ಮಾಡಿ ಎಂದ ಸಚಿವ ಮಾಂಕಾಳ ವೈದ್ಯ, ಇಲ್ಲಿವರೆಗೆ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ನಿಖರ ಮಾಹಿತಿ ಇಲ್ಲ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ 1.25 ಲಕ್ಷ ರೂ. ನೆರವು ನೀಡಿದ್ದೇವೆ. ಮನೆ ಶುಚಿ ಮಾಡಲು 5 ಸಾವಿರ ರೂ. ನೀಡಲಾಗಿದೆ. ಮಳೆ ಕಡಿಮೆಯಾದರೆ ತ್ವರಿತ ಕಾರ್ಯಾಚರಣೆ ನಡೆಸಲು ಅನುಕೂಲವಾಗಲಿದೆ. ಗುಡ್ಡದಿಂದ ನೀರು ಬಂದು ನದಿ ತುಂಬಿ ಹರಿಯುತ್ತಿದೆ. ಹಾಗಾಗಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಕಂಪನಿ ಮೇಲೆ ಕೇಸ್

ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿ ಐಆರ್‌ಬಿ ಕಂಪನಿ ಮೇಲೆ ಕೇಸು ದಾಖಲಿಸಲಾಗಿದೆ. ಅರಣ್ಯ ಇಲಾಖೆಯಿಂದಲೂ ಕೇಸು ದಾಖಲಿಸಲಾಗಿದೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ತನಿಖೆಗೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಏನೇ ಮಾಡಿದರೂ ಈ ಕಂಪನಿ ಮೂಲ ಬಿಜೆಪಿಯಾಗಿದ್ದು, ಅದನ್ನು ಹೊರತುಪಡಿಸಿ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ ಎಂದು ಸಚಿವ ಮಾಂಕಾಳ ವೈದ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net