ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ, ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಸೂಚನೆ

6-klr-10
Published on

ಕೋಲಾರ: ಬಿಜೆಪಿಯ ರೈತ ಮೋರ್ಚಾ ನಿರಾಶ್ರಿತರ ಕೇಂದ್ರವಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳು ಯೋಜನೆಗಳ ಅಧ್ಯಯನ ನಡೆಸಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಪಕ್ಷದಲ್ಲಿ ಎಸ್ಸಿ-ಎಸ್ಟಿ, ಮಹಿಳಾ, ಅಲ್ಪಸಂಖ್ಯಾತ, ಯುವ ಮೋರ್ಚಾ, ಪ್ರಕೋಷ್ಠಗಳಿವೆ. ಇವರುಗಳು ಆಯಾ ವರ್ಗಕ್ಕೆ ರಾಯಭಾರಿಗಳು, ಸಂಬಂಧಿಸಿದ ಸಮಾಜದವರೇ ಇರಬೇಕಾಗುತ್ತದೆ. ರೈತ ಮೋರ್ಚಾಗೆ ಯಾವುದೇ ವರ್ಗವಿಲ್ಲ. ಎಲ್ಲರನ್ನೂ ಸಮಾಜದ ರೈತರನ್ನು ಒಳಗೊಂಡು ಮಾತೃ ಘಟಕಕ್ಕಿಂತಲೂ ಬಲಿಷ್ಠವಾಗಿ ಕಾರ್ಯನಿರ್ವಹಿಸಲು ಅವಕಾಶವಿದೆ ಎಂದರು. ಮುಂದಿನ 15 ದಿನಗಳ ಒಳಗೆ ಮಂಡಲ ಸಮಿತಿಗಳನ್ನು ರಚಿಸಿ ರಾಜ್ಯ ಸಮಿತಿಗೆ ಸಲ್ಲಿಸುವಂತೆ ಜಿಲ್ಲಾಧ್ಯಕ್ಷರಿಗೆ ಸೂಚಿಸಿದರು.

ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಕೇಂದ್ರದಲ್ಲಿ ಮೋದಿ ಪ್ರಧಾನಿಯಾಗಬೇಕು, ಹಿಂದಿನ ಸಂಸದರನ್ನು ಮನೆಗೆ ಕಳುಹಿಸಬೇಕೆಂದು ಎಲ್ಲ ವರ್ಗದವರು ಒಟ್ಟಿಗೆ ಸೇರಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಜೇನುಗೂಡಿನ ರೀತಿ ಮೇಲಿನಿಂದ ಕಟ್ಟಿದ್ದು, ಅಡಿಪಾಯ ಭದ್ರವಾಗಿಲ್ಲ. ತಳಮಟ್ಟದಲ್ಲಿ ಭದ್ರಗೊಳಿಸುವ ಕೆಲಸವಾದರೆ ಮಾತ್ರ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯ ಎಂದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಲಕ್ಷ್ಮಣಗೌಡ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ರೈತ ಮೋರ್ಚಾ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಜಿಲ್ಲಾ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರ ನೀಡಿದರು.

ಜಿಲ್ಲೆಯ ಪ್ರಭಾರಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದರೆಡ್ಡಿ , ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ಗುರುಲಿಂಗನಗೌಡ, ಉಪಾಧ್ಯಕ್ಷ ಸಿ.ವಿ. ಲೋಕೇಶ್, ಶಶಿಕುಮಾರ್, ಖಜಾಂಚಿ ನಲ್ಲೇಶ್‌ರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಗ್ರಾಮಾಂತರ ಅಧ್ಯಕ್ಷ ಸಿಡಿ ರಾಮಚಂದ್ರ, ನಗರಾಧ್ಯಕ್ಷ ತಿಮ್ಮರಾಯಪ್ಪ, ಪದಾಧಿಕಾರಿಗಳಾದ ಪುರ ನಾರಾಯಣಸ್ವಾಮಿ, ಅಶೋಕರೆಡ್ಡಿ , ರೈತ ಮೋರ್ಚಾ ಮಾಜಿ ಅಧ್ಯಕ್ಷ ಬಾಲಕೃಷ್ಣೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ. ಶಿವಣ್ಣ, ನರೇಶ್ ಇತರರಿದ್ದರು.

ಪ್ರತಿಯೊಬ್ಬ ಪದಾಧಿಕಾರಿಗಳು ಇತರ ಪಕ್ಷದಲ್ಲಿರುವ, ತಟಸ್ಥರಾಗಿರುವವರನ್ನು ಭೇಟಿ ಮಾಡಿ ಕೇಂದ್ರ, ರಾಜ್ಯದ ಜನಪರ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟು ಪಕ್ಷಕ್ಕೆ ಪರಿವರ್ತಿಸಬೇಕು ಮತ್ತು ಪಕ್ಷ ಸಂಘಟನೆ ಮಾಡಬೇಕು. ಡಾ. ಕೆ.ಎನ್.ವೇಣುಗೋಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಕೋಲಾರ

ಬೆಳೆ ಸಮೀಕ್ಷೆ ಕುರಿತು ಅರಿವು ಮೂಡಿಸಿ: ಕೋಲಾರ: ಬೆಳೆ ಸಮೀಕ್ಷೆ ಆಧಾರದಲ್ಲೇ ಸರ್ಕಾರ ಪರಿಹಾರ ಘೋಷಿಸುವುದರಿಂದ ಬೆಳೆ ಸಮೀಕ್ಷೆ ಬಗ್ಗೆ ವಿಶೇಷ ಅರಿವು ಮೂಡಿಸಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.

ವಡಗೂರು ರೈತ ರಮೇಶ್ ಅವರ ತೋಟಕ್ಕೆ ಭಾನುವಾರ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು. ರಾಜ್ಯದಲ್ಲಿ ರೈತರ 21 ಕೋಟಿ ತಾಕುಗಳಿದ್ದು, ಈ ಪೈಕಿ 5 ಲಕ್ಷ ತಾಕುಗಳ ಬೆಳೆ ಸಮೀಕ್ಷೆ ನಡೆದಿದೆ. ಅಂದರೆ ಗುರಿ ಶೇ.30 ಕೂಡ ದಾಟಿಲ್ಲ. ರೈತರಿಗೆ ಬೆಳೆ ಸಮೀಕ್ಷೆ ಮಹತ್ವದ ಬಗ್ಗೆ ಅರಿವು ಮೂಡಿಸಲು ರೈತ ಮೋರ್ಚಾ ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.

ದೇಶದಲ್ಲಿ ಕರೊನಾದಿಂದ ಉದ್ಯೋಗ ನಷ್ಟದ ಸಂದರ್ಭದಲ್ಲಿ ಕೃಷಿ ಚಟುವಟಿಕೆ ಶೇ.7 ಹೆಚ್ಚಳವಾಗಿದೆ. ಆಹಾರ ಉತ್ಪನ್ನಗಳಲ್ಲಿ ಶೇ.20 ಹೆಚ್ಚಳ ಕಂಡುಬಂದಿದೆ ಎಂದರು.

ತಿಪ್ಪಸಂದ್ರ ರೈತ ಶ್ರೀನಿವಾಸ್ ಮಾತನಾಡಿ, ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಂದ ಶೇ.8 ಕಮಿಷನ್ ಪಡೆಯುತ್ತಾರೆ. ಅರ್ಹ ರೈತನಿಗೆ ಸರ್ಕಾರದಿಂದ ಸಹಾಯಧನ ಸಿಗುತ್ತಿಲ್ಲ ಎಂದರೆ, ರೈತರಿಗೆ ಗುಣಮಟ್ಟದ ಯಂತ್ರೋಪಕರಣಗಳು ರೈತರಿಗೆ ಕಡಿಮೆ ಬೆಲೆಗೆ ಸಿಗುವಂತಾಗಬೇಕೆಂದು ಪ್ರಗತಿಪರ ರೈತ ನೆನಮನಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net