ಖಾಕಿ ಬಲೆಗೆ ಇರಾನಿ ಗ್ಯಾಂಗ್​: ರಾಜ್ಯಾದ್ಯಂತ 5 ಪ್ರಕರಣ ಪತ್ತೆ, ಪ್ರವಾಸಿ ವೀಸಾದಡಿ ಬಂದು ಕೃತ್ಯ

IRANI
Published on

ಬೆಂಗಳೂರು: ಕಾರು ಶೋರೂಂ ಮತ್ತು ಸರ್ವೀಸ್ ಸೆಂಟರ್​ಗಳಲ್ಲಿ ಕ್ಯಾಷಿಯರ್ ಗಮನವನ್ನು ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಇರಾನಿ ಗ್ಯಾಂಗ್​ನ ಇಬ್ಬರು ಖದೀಮರನ್ನು ಆರ್​ಎಂಸಿ ಯಾರ್ಡ್ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಇರಾನ್ ದೇಶದ ಸಯೀದ್ ರೊಸ್ತಮಿ (28) ಮತ್ತು ಶಬ್ಬೀರ್ ಹುಸೇನ್ (35) ಬಂಧಿತರು. ಆರೋಪಿಗಳು ಕಳೆದ ಒಂದೂವರೆ ವರ್ಷದಲ್ಲಿ ಐದಾರು ಬಾರಿ ಇರಾನ್​ನಿಂದ ಬಂದುಹೋಗಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದಾರೆ. ಆರ್​ಎಂಸಿ ಯಾರ್ಡ್, ಮಂಗಳೂರು, ಬಂಟ್ವಾಳ, ಉಡುಪಿ ಹಾಗೂ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿನ 5 ಪ್ರಕರಣಗಳು ಪತ್ತೆಯಾಗಿವೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಪ್ರವಾಸಿ ವೀಸಾದಲ್ಲಿ ಬರುತ್ತಿದ್ದರು: ಆರೋಪಿಗಳು ವಿಮಾನದಲ್ಲಿ ಪ್ರವಾಸಿ ವೀಸಾದಡಿ ದೆಹಲಿ ಮತ್ತು ಮುಂಬೈಗೆ ಬಂದಿಳಿಯುತ್ತಿದ್ದರು. ಬಳಿಕ ಕರ್ನಾಟಕಕ್ಕೆ ಬಂದು ಕಾರ್ ಶೋರೂಂ ಹಾಗೂ ಕಾರು ಸರ್ವೀಸ್ ಸೆಂಟರ್​ಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಕಡಿಮೆ ಸಿಬ್ಬಂದಿ ಇರುವ ಕಾರು ಶೋರೂಂಗಳಿಗೆ ತೆರಳಿ ಕ್ಯಾಷಿಯರ್​ನನ್ನು ಭೇಟಿ ಮಾಡುತ್ತಿದ್ದರು.

ಹಣ ದೋಚಿದ್ದು ಹೀಗೆ?: 2 ಸಾವಿರ ರೂ. ಮುಖಬೆಲೆಯ ಒಂದೇ ಸಿರೀಸ್​ನ ನೋಟು ಬೇಕು. ಅದಕ್ಕೆ ಕಮಿಷನ್ ಕೊಡುವುದಾಗಿ ಪರಿಚಯಿಸಿಕೊಳ್ಳುತ್ತಿದ್ದರು. 500 ರೂ. ಮುಖಬೆಲೆಯ 4 ನೋಟುಗಳನ್ನು ಕೊಟ್ಟು, 2 ಸಾವಿರ ರೂ. ನೋಟು ತೆಗೆದುಕೊಳ್ಳುವಾಗ ನಕಲಿ ಎಂದು ಹೇಳುತ್ತಿದ್ದರು. ಒಬ್ಬ ತನ್ನ ಬಳಿಯಿದ್ದ ಕೆಲ ನೋಟುಗಳನ್ನು ಕೊಟ್ಟು ಪರಿಶೀಲಿಸಿಕೊಳ್ಳುವಂತೆ ಸೂಚಿಸುತ್ತಿದ್ದ. ಹಣ ಕೊಡುವಾಗ ನೋಟು ಕೆಳಗೆ ಬೀಳಿಸಿದಂತೆ ಮಾಡಿ ಕ್ಯಾಷಿಯರ್ ಗಮನ ಬೇರೆಡೆ ಸೆಳೆಯುತ್ತಿದ್ದ. ಮತ್ತೊಬ್ಬ ಗಲ್ಲಾಪೆಟ್ಟಿಗೆಯಿಂದ ನೋಟಿನ ಕಂತೆಗಳನ್ನು ಎಗರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲೆಲ್ಲಿ ಕೃತ್ಯ ಎಸಗಿದ್ದಾರೆ?

ಜ.26ರಂದು ದೆಹಲಿ ಬಂದಿಳಿದು, ಅಲ್ಲಿಂದ ಮಂಗಳೂರಿಗೆ ಬಂದಿದ್ದರು. ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರು ಶೋರೂಂನಲ್ಲಿ ಕೃತ್ಯ ಎಸಗಿದ್ದಾರೆ. ಇದಾದ ಮೂರು ದಿನದಲ್ಲಿ ಬಂಟ್ವಾಳ ಮತ್ತು ಉಡುಪಿ ನಗರಗಳಲ್ಲಿ ಹಣ ದೋಚಿದ್ದಾರೆ. ಅಲ್ಲಿಂದ ಮೈಸೂರಿಗೆ ಬಂದು ಮಾಂಡೋವಿ ಮೋಟಾರ್ಸ್​ನಲ್ಲಿ 1.30 ಲಕ್ಷ ರೂ. ಎಗರಿಸಿದ್ದಾರೆ. ತದನಂತರ ಬೆಂಗಳೂರಿನ ಜ್ಞಾನಭಾರತಿ ಠಾಣೆಯಲ್ಲಿ ಕೃತ್ಯ ಎಸಗಿದ್ದರು.

ಫೆ.1ರಂದು ಆರ್​ಎಂಸಿ ಯಾರ್ಡ್ ನ ಟ್ರೖೆಡೆಂಟ್ ಆಟೋಮೊಬೈಲ್ ಮಳಿಗೆಗೆ ಹೋಗಿದ್ದರು. ಗ್ರಾಹಕರ ಸೋಗಿನಲ್ಲಿ ಕ್ಯಾಷಿಯರ್​ನನ್ನು ಮಾತನಾಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಹಕರೊಬ್ಬರು ಬಂದಿದ್ದಾರೆ. ಅವರು 1 ಲಕ್ಷ ರೂ. ಅನ್ನು ಟೇಬಲ್ ಮೇಲಿಟ್ಟು, ಉಳಿದ ಹಣದ ಎಣಿಕೆಯಲ್ಲಿ ತೊಡಗಿದ್ದರು. ಈ ವೇಳೆ

ಓರ್ವ ಆರೋಪಿ 2 ಸಾವಿರ ರೂ. ಬಿದ್ದಿದೆ ಎಂದು ಹೇಳಿ ಗಮನ ಬೇರೆಡೆ ಸೆಳೆದಿದ್ದಾನೆ. ಕೂಡಲೇ ಮತ್ತೊಬ್ಬ ಟೇಬಲ್ ಮೇಲಿದ್ದ 500 ರೂ. ಮುಖಬೆಲೆಯ 44 ಸಾವಿರ ರೂ. ದೋಚಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಸಿ ಕ್ಯಾಮರಾ ಸುಳಿವು!

ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯವನ್ನು ಆಧರಿಸಿ ಆರೋಪಿಗಳ ಮುಖಚಹರೆಯನ್ನು ಗುರುತಿಸಲಾಗಿದೆ. ಅವರ ಫೋಟೋ ಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿತ್ತು. ಆಗ ಖದೀಮರ ಗ್ಯಾಂಗ್ ರಾಜ್ಯದ ವಿವಿಧೆಡೆ ಕೃತ್ಯ ಎಸಗಿ ನಗರಕ್ಕೆ ಬಂದಿರುವ ಮಾಹಿತಿ ಸಿಕ್ಕಿತ್ತು. ಟ್ರೖೆಡೆಂಟ್ ಆಟೋಮೊಬೈಲ್ ಮಳಿಗೆಯಲ್ಲಿ ಹಣ ದೋಚಿದ ನಂತರ ಆರೋಪಿಗಳು ಹೋಗಿದ್ದ ರಸ್ತೆಗಳಲ್ಲಿನ ಸಿಸಿ ಕ್ಯಾಮರಾಗಳ ಜಾಡು ಹಿಡಿದು ತನಿಖೆ ಕೈಗೊಳ್ಳಲಾಗಿತ್ತು.

ಲಾಡ್ಜ್​ವೊಂದರಲ್ಲಿ ತಂಗಿರುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಲಾಡ್ಜ್​ಗೆ ಭೇಟಿ ಕೊಟ್ಟು ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ ಎಂದು ಇನ್​ಸ್ಪೆಕ್ಟರ್ ಕೆ.ಎಚ್. ಮಹೇಂದ್ರಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net